ಹಾಡು, ಟ್ರೇಲರ್‌ನಲ್ಲೇ ಪ್ರೇಕ್ಷಕರ ಗಮನ ಸೆಳೆದ 'ಶಿಖಂಡಿ'

ಹಾಡು, ಟ್ರೇಲರ್‌ನಲ್ಲೇ ಪ್ರೇಕ್ಷಕರ ಗಮನ ಸೆಳೆದ 'ಶಿಖಂಡಿ' 'Shikhandi' caught the attention of the audience with its song and trailer

ಲೋಕದರ್ಶನ ವರದಿ 

ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಗುರುಮೂರ್ತಿ ವಿ ನಿರ್ದೇಶನ  

ಈ ಮೊದಲು 'ಮಾರಕಾಸ್ತ್ರ' ಎಂಬ ಸಿನಿಮಾ ನಿರ್ದೇಶಿಸಿದ್ದ ಬಳ್ಳಾರಿ ಮೂಲದ ವಿ. ಗುರುಮೂರ್ತಿ ಈಗ ಎರಡನೇ ಪ್ರಯತ್ನವಾಗಿ 'ಶಿಖಂಡಿ' ಚಿತ್ರವನ್ನು ತೆರೆಗೆ ತರಲು ಸಿದ್ದರಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಯಲ್ಲಮ್ಮ ದೇವಿ ಹಾಡು ಮತ್ತು ಟ್ರೇಲರ್ ಬಿಡುಗಡೆ ಮಾಡಿದ್ದು, ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ 'ಶಿಖಂಡಿ' ಇದೇ ಮೇ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಶ್ರವಣಬೆಳಗೊಳದ ಶಾಸಕರಾದ ಸಿ.ಎನ್ ಬಾಲಕೃಷ್ಣ ಹಾಗೂ ಸಾಯಿ ಸತೀಶ್ ದೊಡ್ಡಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಗುರುಮೂರ್ತಿ, 'ಮಹಾಭಾರತದಲ್ಲಿ ಬರುವ 'ಶಿಖಂಡಿ' ಪಾತ್ರವನ್ನು ಆಧರಿಸಿರುವ ಕಥಾಹಂದರ ಹೊಂದಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಕಲಾವಿದರು ಹಾಗೂ ತಂತ್ರಜ್ಞರ ಸಹಕಾರವೇ ಕಾರಣ. ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರಿಗೆ ವಿಶೇಷ ಧನ್ಯವಾದ. ಯುವರಾಜ್ ಎಂಬ ಯುವಪ್ರತಿಭೆ ನಾಯಕನಾಗಿ, ಖ್ಯಾತಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಮೆಚ್ಚುಗೆ ಪಡೆದುಕೊಂಡಿರುವ ನಮ್ಮ ಚಿತ್ರ ಮೇ 15ರಂದು ಕನ್ನಡದಲ್ಲಿ ಮೊದಲು ಬಿಡುಗಡೆಯಾಗುತ್ತಿದೆ. ಆನಂತರ ಉಳಿದ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಗೆ ಬರಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ' ಎಂದರು.  

'ಹೋಟೆಲ್ ಉದ್ಯಮಿಯಾಗಿರುವ ನಾನು ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ಇದಕ್ಕೆ ಕಾರಣ ಇಂದು ಬಿಡುಗಡೆಯಾಗಿರುವ ಯಲ್ಲಮ್ಮ ತಾಯಿಯ ಹಾಡು. ಈ ಚಿತ್ರ ನಿರ್ಮಾಣ ಮಾಡಲು ನನ್ನನ್ನು ಗುರುಮೂರ್ತಿ ಅವರು ಸಂಪರ್ಕಿಸುತ್ತಿದ್ದರು. ನಾನು ನೋಡೋಣ ಎಂದಿದ್ದೆ. ಎರಡು ತಿಂಗಳ ನಂತರ ಅವರು ಮತ್ತೆ ಬಂದಾಗ ಯಲ್ಲಮ್ಮ ತಾಯಿಯ ಹಾಡನ್ನು ಕೇಳಿಸಿದರು. ಹಾಡು ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ಕುಟುಂಬ ಹಾಗೂ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ. ಇದೇ ಮೇ 15ರಂದು ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ' ಎಂದು ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಕೇಳಿಕೊಂಡುರು. 'ಮೂಲತಃ ಮೈಸೂರಿನವನಾದ ನನಗೆ ನಾಯಕನಾಗಬೇಕೆಂಬ ಹಂಬಲವಿತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಸೂರ್ಯ ನನ್ನ ಪಾತ್ರದ ಹೆಸರು. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ' ಎಂದರು ನಾಯಕ ಯುವರಾಜ್ ಗೌಡ.  

'ಶಿಖಂಡಿ ನನಗೂ ಸಹ ಮೊದಲ ಚಿತ್ರ' ಎಂದು ನಾಯಕಿ ಖ್ಯಾತಿ ತಿಳಿಸಿದರು. ಉತ್ತಮ ಪಾತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ ಎಂದು ನಟಿ ನಿಖಿತಾ ಸ್ವಾಮಿ ಹೇಳಿದರು. ತಮ್ಮ ಪಾತ್ರದ ಬಗ್ಗೆ 'ಬಿಗ್ ಬಾಸ್' ಖ್ಯಾತಿಯ ನೀತು, ವೇದ ಹಾಗೂ ಬಳ್ಳಾರಿಯ ಚಾಂದಿನಿ ವಿವರಣೆ ನೀಡಿದರು. ಮೊದಲ ಬಾರಿಗೆ ಮಂಗಳಮುಖಿ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟ ರಾಘವೇಂದ್ರ (ರಾಘು) ಹೇಳಿದರು. ಯಲ್ಲಮ್ಮ ಹಾಡಿನ ಗೀತರಚನೆಕಾರ ಹಾಗೂ ಸಂಗೀತ ನಿರ್ದೇಶಕ ಮಂಜು ಕವಿ ಹಾಡಿನ ಕುರಿತು ಮಾಹಿತಿ ನೀಡಿದರು. ಸಹ ನಿರ್ಮಾಪಕಿ ಪೋಲಾ ಲಕ್ಷ್ಮೀ, ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಅವರ ಪುತ್ರ ಕರಣ್, ಸೊಸೆ ಹಾಗೂ ಮಗಳು ನಮ್ರತಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.