‘ಪ್ರತಿಯೊಬ್ಬರೂ ನೀರು ಮಾಲಿನ್ಯ ನಿಯಂತ್ರಣ ಕಾಯ್ದೆ ಪಾಲಿಸಬೇಕು’

‘ಪ್ರತಿಯೊಬ್ಬರೂ ನೀರು ಮಾಲಿನ್ಯ ನಿಯಂತ್ರಣ ಕಾಯ್ದೆ ಪಾಲಿಸಬೇಕು’ 'Everyone should follow the Water Pollution Control Act'

ಲೋಕದರ್ಶನ ವರದಿ 

ಧಾರವಾಡ 06: ನೀರಿನ ಉಳಿತಾಯ, ಸದ್ಬಳಕೆ ಹಾಗೂ ನೀರಿನ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನೀರು ಮಾಲಿನ್ಯ ನಿಯಂತ್ರಣ ಕಾಯ್ದೆಹಿ1974 ಅನ್ನು ಪಾಲಿಸಬೇಕೆಂದು ಎಫ್‌. ಹೆಚ್‌. ಜಕ್ಕಪ್ಪನವರು, ಶಾಸಕರು, ವಿಧಾನ ಪರಿಷತ್ತು, ಕರ್ನಾಟಕ ಸರ್ಕಾರ ಕರೆ ನೀಡಿದರು. 

ಅವರು ದಿ. 06 ರಂದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ವಿಶ್ವ ಭೂ ದಿನಾಚರಣೆ ಹಿ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಾಲ್ಮಿ ಸಂಸ್ಥೆಯ ಆವರಣವು ಸುಸಜ್ಜಿತವಾಗಿದ್ದು, ಇಂತಹ ಉಪಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಅವರು, ದೆಹಲಿಯ ವಾಟರ್ ಬೋರ್ಡ್‌ನಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು “ಭಾರತದ ಪ್ರಥಮ ನೀರಾವರಿ ತಜ್ಞ” ಎಂದು ಉಲ್ಲೇಖಿಸಿರುವುದನ್ನು ಸ್ಮರಿಸಿದರು. ತಾವೂ ರೈತ ಕುಟುಂಬದಿಂದ ಬಂದಿರುವುದಾಗಿ ತಿಳಿಸಿದ ಅವರು, ಗುಜರಾತ್ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನಾ ಘಟಕಗಳ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸುತ್ತಿದ್ದು,  ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗಗಳ ರೈತರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಾನುವಾರುಗಳ ಖರೀದಿಗೆ ಸರ್ಕಾರದಿಂದ 25ಅ ರಿಯಾಯಿತಿ ದೊರೆಯುತ್ತಿರುವುದನ್ನೂ ತಿಳಿಸಿದರು. ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕ, ಲಾಭದಾಯಕ ಕೃಷಿಗೆ ಕೃಷಿ ವಿಜ್ಞಾನಿಗಳ ಸಂಶೋಧನೆಗಳು ರೈತರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.  

ಕೃಷಿ ಹಾಗೂ ಪಶು ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕೃಷಿ ಕೈಗೊಳ್ಳಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡುವ ಉದ್ದೇಶದಿಂದ ‘ಧಾರವಾಡ ಜಿಲ್ಲಾಡಳಿತ ಜನರ ಮನೆಗೆ’ ಎಂಬ ಯಶಸ್ವಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.  

ಭಾರತ ದೇಶದ ಕೃಷಿಭೂಮಿಯಲ್ಲಿ ಸಮರ​‍್ಕವಾಗಿ ಸಾಗುವಳಿ ಮಾಡಿದರೆ, ಭಾರತವು ಇಡೀ ಜಗತ್ತಿನ ಆಹಾರ ಭಂಡಾರವಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.  

ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆ, ಸದ್ಬಳಕೆ ಹಾಗೂ ಅಭಿವೃದ್ಧಿಗೆ ಪೂರಕವಾಗುವ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಿದರೆ, ಲಾಭದಾಯಕ ಕೃಷಿ ನಡೆಸುವುದರ ಜೊತೆಗೆ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ,  ಈ ನಿಟ್ಟಿನಲ್ಲಿ ವಾಲ್ಮಿ ಸಂಸ್ಥೆಯು ರೈತರಿಗೆ ನಿರಂತರವಾಗಿ ತರಬೇತಿಗಳನ್ನು ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ವಾಲ್ಮಿ ಸಂಸ್ಥೆಯು ಮಣ್ಣು ಮತ್ತು ನೀರಿನ ಸದ್ಬಳಕೆ ಹಾಗೂ ರೈತರಿಗೆ ಅನುಕೂಲಕರ ಹೊಸ ಯೋಜನೆಗಳನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಅವುಗಳಿಗೆ ಅನುದಾನ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಅತಿಥಿಗಳಾಗಿ ಆಗಮಿಸಿದ ಡಾ. ವಿ. ಬಿ. ಕುಲಿಗೋಡ, ಮಣ್ಣು ವಿಜ್ಞಾನಿಗಳು ಹಾಗೂ ನಿವೃತ್ತ ವಿದ್ಯಾಧಿಕಾರಿಗಳು, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ ಇವರು ಮಾತನಾಡುತ್ತಾ ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಮಣ್ಣು ಅವನತಿಯತ್ತ ಸಾಗಿದೆ. ಕೃಷಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳು ಸಮತೋಲನವಾಗಿರಬೇಕು. ಕೃಷಿಗೆ ಅಂತರ್ಜಲದ ಹೆಚ್ಚು ಬಳಕೆಯಾಗುತ್ತದೆ. ಬೋರ್‌ವೆಲ್ ನೀರಿನಲ್ಲಿ ಲವಣದ ಪ್ರಮಾಣದ ಹೆಚ್ಚಾಗಿದ್ದು, ನೀರು ಮತ್ತು ಮಣ್ಣಿನ ಅವೈಜ್ಞಾನಿಕ ನಿರ್ವಹಣೆಯಿಂದ  ಸವಳು-ಜವಳು ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ 80,000 ಹೆಕ್ಟೇರ್‌ಗೂ ಹೆಚ್ಚಿನ ಅಚ್ಚುಕಟ್ಟು ಪ್ರದೇಶ ಸವಳು ಜವಳಾಗಿದೆ. ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ ಹೆಚ್ಚಿನ ವೆಚ್ಚದಾಯಕವಾಗಿದೆ ಎಂದರು. ಮಣ್ಣು ಪರೀಕ್ಷೆ ಮತ್ತು ನೀರು ಪರೀಕ್ಷೆ ಮೂಲಕ ಮಣ್ಣಿನ ಗುಣಧರ್ಮವನ್ನು ಆಧರಿಸಿದ ಶಿಫಾರಸ್ಸು ಮಾಡಿದ ಪೋಷಕಾಂಶಗಳು ಹಾಗೂ ರಾಸಾಯನಿಕಗಳನ್ನು ಮಾತ್ರ ಪೂರೈಸಬೇಕೆಂದರು. 

ಡಾ. ಗೀರೀಶ ಎನ್‌. ಮರಡ್ಡಿ, ನಿರ್ದೇಶಕರು, ವಾಲ್ಮಿ, ಧಾರವಾಡ ಇವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಜನಸಂಖ್ಯೆ ಹೆಚ್ಚಾಗುತ್ತಿದ್ದು, ಕೃಷಿ ಭೂಮಿ ಕಡಿಮೆಯಾಗುತ್ತಿದೆ ಇಂಥಹ ಸಂದರ್ಭದಲ್ಲಿ ಆಹಾರ ಭದ್ರತೆ ನೀಡುವುದೂ ಕೂಡಾ ಅನಿವಾರ್ಯವಾಗಿದೆ. ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ವೈಜ್ಞಾನಿಕ ನಿರ್ವಹಣೆಯಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿದೆ ಎಂದರು.  

ಕೃಷಿಯಲ್ಲಿ ಅನೇಕ ಸವಾಲುಗಳಿವೆ. ಆದರೆ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡಾಗ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯತೆ ಇದೆ ಎಂದರು. ಭಾರತದ ಒಟ್ಟು ಲಭ್ಯವಿರುವ ಭೌಗೋಳಿಕ ಪ್ರದೇಶ 329 ಮಿಲಿಯನ್ ಹೆಕ್ಟೇರ್, ಇದರಲ್ಲಿ ಸಾಗುವಳಿಗೆ ಲಭ್ಯವಿರುವ ಭೂಪ್ರದೇಶ ಕೇವಲ 141 ಮಿಲಿಯನ್ ಹೆಕ್ಟೇರ್ ಮಾತ್ರ. ಕೈಗಾರೀಕರಣ ಮತ್ತು ನಗರೀಕರಣದಿಂದ ಸಾಗುವಳಿ ಕ್ಷೇತ್ರ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ರಾಸಾಯನಿಕಗಳ ಸೂಕ್ತ ಹಾಗೂ ವೈಜ್ಞಾನಿಕ ಬಳಕೆ ಅಗತ್ಯ ಎಂದರು. ಏಕ ಬೆಳೆ ಪದ್ಧತಿ ಕಬ್ಬು, ಭತ್ತ, ಗೋವಿನಜೋಳ ಮತ್ತು ಹತ್ತಿಯಂಥಹ ಬೆಳೆಗಳನ್ನು ನಿರಂತರವಾಗಿ ಬೆಳೆಯುವುದರಿಂದ ಸಸ್ಯಗಳಿಗೆ ಅವಶ್ಯಕ ಪೋಷಕಾಂಶಗಳು ದೊರೆಯದೇ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಏಕ ಬೆಳೆ ಪದ್ಧತಿಯನ್ನು ಹೊರತು ಪಡಿಸಿ ಬೆಳೆ ಬದಲಾವಣೆಯನ್ನು ಅನುಸರಿಸುವುದರಿಂದ ಮಣ್ಣಿನ ಫಲವತ್ತತೆ ಸಾಧ್ಯ ಎಂದರು. ರೈತರು ವೈಜ್ಞಾನಿಕ ಕೃಷಿಯೊಂದಿಗೆ ಪಶು ಆಧಾರಿತ ಕೃಷಿ, ವೃಕ್ಷ ಆಧಾರಿತ ಕೃಷಿ ಮತ್ತು ಮೌಲ್ಯವರ್ಧನೆ ಆಧಾರಿತ ಕೃಷಿ ಮಾಡಬೇಕೆಂದರು.  

ಸರ್ಕಾರದ ಯೋಜನೆಗಳು, ಅಧಿಕಾರಿಗಳ ವಿಜ್ಞಾನಿಗಳ ಶ್ರಮದಿಂದ ಎಲ್ಲಾ ಬೆಳೆಗಳಲ್ಲಿ ಬೀಜದಿಂದ ಪ್ರಾರಂಭಿಸಿ, ಬೆಳೆಗಳ ನಿರ್ವಹಣೆ, ರೋಗಗಳ ನಿರ್ವಹಣೆ, ಕೀಟ ನಿರ್ವಹಣೆ ತಂತ್ರಜ್ಞಾನದಿಂದ ಬೆಳೆ ಉತ್ಪಾದಕತೆ ಹೆಚ್ಚಾಗಿದೆ ಎಂದರು. ಇಂದು ಹಾಲು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಕಡಲೆ ಬೆಳೆಯಲ್ಲಿ ರೋಗನಿರ್ವಹಣೆ ಟ್ರೈಕೋಡರ್ಮಾಬಳಕೆ ತಂತ್ರಜ್ಞಾನ ಅಲ್ಲದೇ ರೈತರಿಗೆ ಅನುಕೂಲವಾಗುವಂಥ ರೋಗನಿರೋಧಕ ತಳಿಗಳನ್ನು ಇಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಎಂದರು. ಭತ್ತದ ಬೆಳೆಗೆ ಇಂದು ಯತೇಚ್ಛವಾಗಿ ನೀರು ಬಳಕೆ ಮಾಡಲಾಗುತ್ತದೆ. ಅವಶ್ಯಕತೆ ಇದ್ದಾಗ ಮಾತ್ರ ಭತ್ತದ ಬೆಳೆಗೆ ನೀರು ಪೂರೈಕೆ ಮಾಡಬೇಕೆಂದರು.  

ಗುರುಸಿದ್ದಪ್ಪ ಹುಬ್ಬಳ್ಳಿ, ಪ್ರಗತಿಪರ ರೈತರು, ರಾಯಾಪುರ, ಧಾರವಾಡ, ಶ್ರೀ ಬಸವರಾಜ ಮಾಟೊಳ್ಳ್ಳಿ, ವಾಹನ ಚಾಲಕರು, ವಾಲ್ಮಿ, ಧಾರವಾಡ, ವಿಷ್ಣು, ಪ್ರಗತಿಪರ ರೈತರು ಹಾಗೂ ಉದ್ಯಮಿಗಳು, ಧಾರವಾಡ ಇವರನ್ನು ಸನ್ಮಾನಿಸಲಾಯಿತು. 

ಇಂ. ಬೈಲಪ್ಪ, ನಿರ್ಮಿತಿ ಕೇಂದ್ರ, ಧಾರವಾಡ ಮತ್ತು ಇಂ. ಬಿ. ವೈ. ಬಂಡಿವಡ್ಡರ, ಪ್ರಾಧ್ಯಾಪಕರು ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು, ತುಂಗಭದ್ರಾ ಯೋಜನೆಯ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ರೈತರು ಮತ್ತು ವಾಲ್ಮಿ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.   

ಇಂ. ಪ್ರದೀಪ ದೇವರಮನಿ, ಸಹ ಪ್ರಾಧ್ಯಾಪಕರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಇಂದುಧರ ಹಿರೇಮಠ, ಸಹಾಯಕ ಪ್ರಾಧ್ಯಾಪಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುನಂದಾ ಸಿತೋಳೆ, ಸಹಾಯಕ ಪ್ರಾಧ್ಯಾಪಕರು ವಂದಿಸಿದರು ಮತ್ತು ಅನುರಾಧಾ ಮಳಗಿ ನಿರೂಪಿಸಿದರು.