ದ್ರೌಪದಿಯ ಸೀರೆಗೆ ಕೈಯಿಟ್ಟು ಮಹಾಭಾರತ ಜರುಗಿತು ಜಯಮ್ಮನ ಸೆರಗಿಗೆ ಕೈಯಿಟ್ಟು ಡಿಎಂಕೆ ಧೂಳಿಪಟವಾಯಿತು...!

ಕೆಲವೊಂದು ಸಲ ನಮಗೇ ಗೊತ್ತಿಲ್ಲದಂತೆ ಕೆಲವೊಬ್ಬರು ನಮಗೆ ವಿಶೇಷವೆನಿಸುತ್ತಾರೆ. ಮತ್ತೆ ಕೆಲವು ಸಲ ಕೆವಲರು ನಮಗೆ ಅರಿವಾಗದಂತೆ ಬದುಕಿನ ಪಾಠವನ್ನು ಕಲಿಸುತ್ತಾರೆ. ಹಾಗೆ ಸಾಗುತ್ತಿರುವ ದಾರಿಯಲ್ಲಿ ಕೆಲವೊಬ್ಬರು ತಮ್ಮ ಬದುಕಿನಲ್ಲಿ ಬಂದ ಸವಾಲುಗಳನ್ನು ಎದುರಿಸಿದ ಪರಿಯಿಂದ ನಮಗೆ ಮಾದರಿಯಾಗಿ ನಿಲ್ಲುತ್ತಾರೆ. ಹೀಗಾಗಿ ಬದುಕನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ತಿಳಿಸಿಕೊಡುವ ಅಂಥವರನ್ನು ನಮಗೇ ಗೊತ್ತಿಲ್ಲದಂತೆ ನಾವು ಅಭಿಮಾನಿಸುತ್ತೇವೆ. ಹಾಗೂ ಆರಾಧಿಸುತ್ತೇವೆ. ಹೀಗೆ ಅಭಿಮಾನದ ಅಲೆಯಲ್ಲಿ ತೇಲುತ್ತ ಸಾಗಿದವರ ಬದುಕನ್ನೊಮ್ಮೆ ಕಂಡಾಗ ಈ ಜೀವನ ಎನ್ನುವುದು ಕೇವಲ ಗೆದ್ದವರನ್ನು ಮಾತ್ರ ನೆನಪಿಟ್ಟುಕೊಳ್ಳುತ್ತದೆ. ಸೋತವನನ್ನು ಬೇಗನೆ ಮರೆತು ಬಿಡುತ್ತದೆ. ಆದರೆ ಸೋತುವನು ಗೆದ್ದನೆಂದರೆ ಆತನನ್ನು ಅಜರಾಮರವಾಗಿಸುತ್ತದೆ ಎನ್ನುವ ಸತ್ಯ ನಮಗೆ ಅರ್ಥವಾಗುತ್ತದೆ. ಈ ವಿಚಾರವನ್ನು ಇಲ್ಲೇಕೆ ಹೇಳುತ್ತಿದ್ದೇನೆ ಎನ್ನುವ ಕುತೂಹಲ ಈವಾಗ ತಮ್ಮನ್ನು ಕಾಡದೇ ಇರದು ಎನ್ನುವುದು ನನಗೆ ಗೊತ್ತಿದೆ. ಆದರೂ ಆ ಕುತೂಹಲವನ್ನು ಕೊಂಚ ಹಿಡಿದಿಟ್ಟುಕೊಂಡು ಸ್ವಲ್ಪ ಮುಂದೆ ಸಾಗಿದರೆ ಒಂದು ಸುಂದರ ಬದುಕಿನ ಹಂದರ ತಮ್ಮ ಕಣ್ಣೇದುರು ಅನಾವರಣಗೊಳ್ಳುತ್ತದೆ. ಆ ದಿನ ಹೀಗೆ ಏನೋ ಓದುತ್ತ ಕುಳಿತಿದ್ದಾಗ ಆ ಒಂದು ವಿಷಯ ನನ್ನ ಕಣ್ಣಿಗೆ ಬಿತ್ತು. ಓದುತ್ತ ಸಾಗುತ್ತಿದ್ದಂತೆ ಅದು ಮತ್ತಷ್ಟು ರೋಚಕತೆಯನ್ನು ಹೆಚ್ಚಿಸಿತು. ಓದುತ್ತ ಓದುತ್ತ ಸಾಗಿದಾಗ ಅದರಲ್ಲಿ ನಡೆಯುವ ಒಂದೊಂದು ಘಟನೆಗಳು, ಬರುವಂತ ಅನಿರೀಕ್ಷಿತ ತಿರುವುಗಳು, ನಡೆಯುಂತ ದೌರ್ಜನ್ಯಗಳು, ಪ್ರತಿಕಾರದ ಹೆಜ್ಜೆಗಳು, ಕ್ಷಣ ಕ್ಷಣದ ಸಾವಾಲುಗಳು, ಅದಕ್ಕೆ ನೀಡಿದ ಜವಾಬುಗಳು, ತಂತ್ರ ಪ್ರತಿತಂತ್ರಗಳು, ಮಾಡಿದ ಪ್ರತಿಜ್ಞೆಗಳು, ಅದಕ್ಕೆ ತಕ್ಕಂತೆ ನಡೆಯುವ ಕ್ರಾಂತಿಕಾರಕ ಬದಲಾವಣೆಗಳು ಎಲ್ಲವೂ ಕೂಡ ಸಿನೀಮಿಯ ರೀತಿಯಲ್ಲಿ ಕಣ್ಣಮುಂದೆ ಕಟ್ಟತೊಡಗಿದವು. ಕೊನೆಗೆ ಅದರಲ್ಲಿ ಬರುವ ಓರ್ವ ಅಸಹಾಯಕ ಹೆಣ್ಣುಮಗಳೊಬ್ಬಳು ಮುಂದೆ ಮಹಾನಾಯಕಿಯಾಗಿ ಬೆಳೆಯುವುದನ್ನು ಕಂಡ ಮೇಲೆ ನಿಜಕ್ಕೂ ಬದುಕೆಂದರೆ ಇದಕ್ಕನಬೇಕು ಎನ್ನುವ ಭಾವನೆ ಮೂಡಿತು. ಇದೇನು ನಾನು ಯಾವುದೋ ಕಥೆಯನ್ನೋ ಇಲ್ಲ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳ ಸಾರವನ್ನೋ ಹೇಳುತ್ತಿದ್ದೇನೆ ಎನ್ನುವ ನಿಧರ್ಾರಕ್ಕೆ ಬರಬೇಡಿ. ನಾನಿಲ್ಲಿ ಹೇಳುತ್ತಿರುವುದು ಚಿತ್ರಕಥೆಯಲ್ಲ ಬದಲಿಗೆ ಚಾರಿತ್ರಿಕವಾಗಿ ಗುರುತಿಸಿಕೊಂಡ ಮಹಿಳೆಯೊಬ್ಬಳ ಬದುಕಿನ ಯಶೋಗಾಥೆ. ಅವಮಾನವಾದಲ್ಲಿಯೇ ಸನ್ಮಾನ ಪಡೆದು, ಅವಮಾನಿಸಿದವರಿಗೆ ಪ್ರತಿಕಾರದ ಬಹುಮಾನ ನೀಡಿದವಳ ಕಥೆ. 'ನಾನೊರ್ವ ಹೆಣ್ಣು ನನ್ನಿಂದೇನಾಗುತ್ತದೆ' ಎಂದುಕೊಳ್ಳುವ ಮಹಿಳೆಯರಿಗೆ ನಾವು ಮನಸ್ಸು ಮಾಡಿದರೆ ಏನುಬೇಕಾದರೂ ಮಾಡಬಹುದು ಎಂದು ಸಾಧಿಸಿ ತೋರಿಸಿದ ಸಾಧಕಿಯೊಬ್ಬಳ ಹೋರಾಟದ ಕಥೆ. ಚಿತ್ರರಂಗದಲ್ಲಿ ಮಿಂಚಿ ಮಿನುಗುತಾರೆಯಾಗಬೇಕಿದ್ದವಳು ರಾಜಕೀಯ ರಂಗಕ್ಕೆ ಧುಮುಕಿ ಮುಖ್ಯಮಂತ್ರಿ ಗದ್ದುಗೆ ಹಿಡಿದ ರಣರೋಚಕ ಕಹಾನಿ. ಚಲನಚಿತ್ರ ರಂಗದಲ್ಲಿ ಜಯಲಲಿತಳಾಗಿ ರಾಜಕೀಯದ ಮೂಲಕ ಜಯಮ್ಮನಾಗಿ ಮಿಂಚಿ ಮರೆಯಾದ ದೃವತಾರೆಯ ವ್ಯಥೆಯ ಮಧ್ಯದಲ್ಲಿಯೇ ಅರಳಿದ ನೈಜ ಕಥೆ.

ಅದು ಎಂಬತ್ತರ ದಶಕ. ರಾಜಕೀಯ ರಂಗ ಎನ್ನುವುದು ಒಂದು ಪ್ರತಿಷ್ಠೆಯ ಕಣವಾಗಿ ಗುರುತಿಸಿಕೊಂಡ ಕಾಲಘಟ್ಟ. ಅದರಲ್ಲೂ ತಮಿಳುನಾಡು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಆಡಳಿತ ಜೋರಾಗಿತ್ತು. ಇಡೀ ರಾಜಕೀಯವು ಸಿನಿಮಾ ರಂಗದ ಜೊತೆ ತಳಕು ಹಾಕಿಕೊಂಡಿತ್ತು. ಅಲ್ಲಿ ಸಿನಿಮಾ ಮತ್ತು ರಾಜಕೀಯ ಒಂದು ನಾಣ್ಯದ ಎರಡು ಮುಖಗಳಾಗಿ ಗುರುಸಿಕೊಂಡಿದ್ದವು. ಇಂಥ ಸಂದರ್ಭದಲ್ಲಿ ಎಐಡಿಎಂಕೆ ಪಕ್ಷದ ಎಂಜಿಆರ್ ಮುಖ್ಯಂತ್ರಿಯಾಗಿ ಜನಪ್ರೀಯತೆ ಗಳಿಸಿಕೊಂಡಿದ್ದರು. ಎಲ್ಲರಲ್ಲೂ ಎಂಜಿಆರ್ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಕೇಡುಗಾಲಕ್ಕೆ ನಡೆಯಬಾರದು ನಡೆಯುತ್ತವೆ ಎನ್ನುವಂತೆ ಅದ್ಯಾವ ಗಳಿಗೆಯಲ್ಲೋ ಗೊತ್ತಿಲ್ಲ ಆಗಿನ ಖ್ಯಾತ ಚಿತ್ರನಟಿ ಜಯಲಲಿತಾರ ಹೆಸರು ಎಂಜಿಆರ್ ಜೊತೆಗೆ ತಗಲಾಕಿಕೊಂಡು ರಾಜ್ಯದಲ್ಲಿ ಸಂಚಲನ ಮೂಡಿಸಿತು. ಅದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ ಎನ್ನುವುದು ಇಲ್ಲಿ ಅಪ್ರಸ್ತುತ. ಇರಲಿ, ಆದರೆ ಜಯಲಲಿತಾ ಮಾತ್ರ ಎಂಜಿಆರ್ ಅವರನ್ನು ತಮ್ಮ ರಾಜಕೀಯ ಗುರು ಎಂದು ಹೇಳಿಕೊಳ್ಳುತ್ತಲಿದ್ದರು. ಇದನ್ನು ಒಪ್ಪದ ರಾಜಕೀಯದ ಜನರೆಲ್ಲ ಇವರಿಬ್ಬರ ಸಂಬಂಧಕ್ಕೆ ಬಣ್ಣ ಬಳಿದಿದ್ದರು. ರಂಗು ರಂಗಿನ ಕಥೆಗಳನ್ನು ಹುಟ್ಟುಹಾಕಿ ಖುಷಿ ಪಟ್ಟಿದ್ದರು. ಅವರ ಪ್ರತಿ ನಡೆಯನ್ನು ಯಾವಯಾವುದಕ್ಕೋ ಹೋಲಿಸಿ ವಿಕೃತ ಆನಂದ ಪಡೆಯುತ್ತಿದ್ದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜಯಲಲಿತಾ ತಮಿಳುನಾಡಿನ ರಾಜ್ಯ ರಾಜಕೀಯಕ್ಕೆ ಮೆಲ್ಲನೆ ಪ್ರವೇಶ ಪಡೆದಿದ್ದರು. ಎಂದಿನಂತೆಯೇ ಎಂಜಿಆರ್ ಅವರೊಂದಿಗೆ ಅತೀ ಆಪ್ತರಾಗಿ ಮುಂದುವರಿದರು. ಹಂತ ಹಂತವಾಗಿ ತನ್ನ ಚಾಣಾಕ್ಷ ನಡೆಯಿಂದ ಎಐಡಿಎಂಕೆ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಳ್ಳುವುದರಲ್ಲಿ ಯಶಸ್ವಿ ಕೂಡ ಆಗಿದ್ದರು. ಆದರೆ ತಮ್ಮ ವೈಯಕ್ತಿಕ ಬದುಕು ಹಾಗೂ ರಾಜಕೀಯ ಜೀವನ ಎರಡರ ಜೊತೆಗೂ ತಮ್ಮ ಹೆಸರಿನೊಂದಿಗೆ ಎಂಜಿಆರ್ ಎನ್ನುವ ಹೆಸರು ಶಾಶ್ವತವಾಗುತ್ತ ಸಾಗುತ್ತಿದೆ ಎನ್ನುವುದನ್ನು ಅರಿತ ಜಯಲಲಿತಾ ಜೀವನ ಪರ್ಯಂತೆ ಕುಮಾರಿಯಾಗಿಯೇ ಉಳಿಯುವ ನಿಧರ್ಾರಕ್ಕೆ ಬಂದು ಬಿಟ್ಟರು. ಇದರ ನಡುವೆಯೇ ಎಂಜಿಆರ್ ಅಕಾಲಿಕ ಮರಣ ಜಯಲಲಿತಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಒಂದೆಡೆ ಅವರೊಂದಿಗೆ ಬೆಸೆದುಕೊಂಡ ಹೆಸರು. ಮತ್ತೊಂದೆಡೆ ರಾಜಕೀಯ ಗುರುವೇ ಆಗಿದ್ದ ಎಂಜಿಆರ್ ಅವರೆ ಇಲ್ಲದೇ ಹೋಗಿರುವುದು ಅಕ್ಷರಶಃ ಜಯಲಲಿತಾರನ್ನು ಮುದ್ದೆ ಮಾಡಿತ್ತು. ಅದರ ಜೊತೆಗೆ ಹೆಜ್ಜೆ ಹೆಜ್ಜೆಗೂ ಅವರಿಗಾದ ಅವಮಾನ ಹಿಂಸೆ ಅದ್ಯಾಮಮಟ್ಟದಲ್ಲಿ ಅವರನ್ನು ಭೂಮಿಗಿಳಿಸಿಬಿಟ್ಟಿತ್ತು ಎಂದರೆ ಅವರ ಜಾಗದಲ್ಲಿ ಬೇರ್ಯಾರಾದರೂ ಇದ್ದರೆ ಬಹುಶಃ ಬದುಕಿರುವ ಸಾಹಸ್ಸಕ್ಕೆ ಇಳಿಯುತ್ತರಲಿಲ್ಲವೋ ಏನೋ ಎನಿಸುತ್ತದೆ.

ಬಣ್ಣದ ಬದುಕಿನಲ್ಲಿ ನಟಿಸಿದ್ದ ಜಯಲಲಿತಾರಿಗೆ ನಿಜ ಜೀವನದಲ್ಲಿ ನಟಿಸುವುದು ಅಸಾಧ್ಯವಾಗಿತ್ತು. ಹೆಜ್ಜೆ ಹೆಜ್ಜೆಗೂ ಬದುಕಿನ ಪ್ರತಿ ಕ್ಷಣದಲ್ಲ್ಲೂ ಅವಮಾನ ಎದುರಾದವು. ಅದೆಷ್ಟರ ಮಟ್ಟಿಗೆ ಎಂದರೆ ಎಂಜಿಆರ್ ಅವರು ಮರಣಿಸಿದಾಗ ಅವರ ಅಂತಿಮ ದರ್ಶನಕ್ಕೆ ತೆರಳಿದ ಜಯಲಲಿತಾರನ್ನು ಎಂಜಿಆರ್ ಪತ್ನಿ ಜಾನಕಿಯವರ ಅಳಿಯ ಎಂಎಲ್ಎ ರಾಮಾನಾಯಕ್ ಅಡ್ಡಗಟ್ಟಿ ತಡೆದರು. ಈ ಸಂಸಾರದಲ್ಲಿ ಹುಳಿ ಹಿಂಡಿದ ನಿನಗೆ ಇಲ್ಲಿ ಕಾಲಿಡುವುದಕ್ಕೂ ಅವಕಾಶವಿಲ್ಲ ಎಂದು ಎಲ್ಲರೆದುರು ಅವಮಾನ ಮಾಡಿ ನೂಕಿಬಿಟ್ಟರು. ಇದು ಜಯಲಲಿತಾರನ್ನು ಮಾನಸಿಕವಾಗಿ ಅದೆಷ್ಟು ಕಂಗಾಲಾಗುವಂತೆ ಮಾಡಿತೆಂದರೆ ಈ ಬದುಕು ಇಲ್ಲಿಗೆ ಸಾಕಪ್ಪ ಸಾಕು ಎನ್ನುವ ನಿಧರ್ಾರಕ್ಕೆ ಬರುವಂತೆ ಮಾಡಿತ್ತು. ಸೂರ್ಯಮುಳುಗಿದನೆಂದು ಅಳುತ್ತ ಕುಳಿತರೆ ನಕ್ಷತ್ರಗಳನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ ಎನ್ನುವ ರವೀಂದ್ರನಾಥರ ಮಾತಿನಂತೆ ನಡೆದ  ಘಟನೆಯನ್ನು ನೆನೆಯುತ್ತ ಕುಳಿತರೆ ಮುಂದೆ ಬದುಕು ಮಾಡುವುದು ಅಸಾಧ್ಯವೆನ್ನುವುದನ್ನು ಅರಿತ ಜಯಲಲಿತಾ ತಮ್ಮ ಗುರು ಹಾಕಿಕೊಟ್ಟ ರಾಜಕೀಯ ಮಾರ್ಗದಲ್ಲಿ ಪಯಣ ಆರಂಭಿಸಲು ಸಿದ್ಧರಾದರು. ಕೆಲವರ ಸಾವು ಅವರ ಆಪ್ತರಿಗೆ ನೋವು ನೀಡಿದರೆ ಶತ್ರುಗಳಿಗೆ ಸಂತಸಪಡಲು ಸಹಾಯ ಮಾಡುತ್ತದೆ ಎನ್ನುವ ಮಾತು ಇಲ್ಲೂ ಕೂಡ ಸತ್ಯವಾಯಿತು. ಎಂಜಿಆರ್ ಸಾವಿನ ಪರಿಣಾಮ ರಾಜ್ಯದ ಆಡಳಿತ ಚುಕ್ಕಾಣಿ ಡಿಎಂಕೆ ಕೈಸೇರಿತು. ಕರುಣಾನಿಧಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದರು. ಇದರ ಮೂಲಕ ತಮಿಳು ನಾಡಿನಲ್ಲಿ ಹೊಸ ಅಲೆ ಸೃಷ್ಠಿಯಾಯಿತು. ಇದರ ಮಧ್ಯದಲ್ಲಿ ಎಂಜಿಆರ್ ಬಿಟ್ಟರೆ ನನಗೆ ಸರಿಸಮನಾಗಿ ನಿಲ್ಲಬಲ್ಲ ಯಾವುದೇ ನಾಯಕನೂ ಇಲ್ಲ ಎಂದುಕೊಂಡಿದ್ದ ಕರುಣಾನಿಧಿಗೆ ಜಯಲಲಿತಾ ತಮಗೆ ಪಯರ್ಾಯ ಶಕ್ತಿಯಾಗಿ ಬೆಳೆಯುತ್ತಾರೆ ಎಂದು ಕನಸಿನಲ್ಲಿಯೂ ಕಂಡಿದ್ದಿಲ್ಲ. ಆದರೆ ಮುಂದೆ ನಡೆದಿದ್ದೆಲ್ಲ ಇಂದು ಇತಿಹಾಸವಾಗಿ ತಮಿಳುನಾಡಿನ ರಾಜಕೀಯ ಚರಿತ್ರೆಯನ್ನು ಇಂಚಿಂಚಾಗಿ ಬಿಚ್ಚಿಡುತ್ತಾ ಸಾಗುತ್ತದೆ. ಕರುಣಾನಿಧಿಯ ಕಾರ್ಯವೈಖರಿಯನ್ನು ವಿರೋಧಪಕ್ಷದಲ್ಲಿ ಕುಳಿತು ಕುಟುಕುತ್ತಿದ್ದ ಜಯಲಲಿತಾರನ್ನು ಕಂಡರೆ ಕರುಣಾನಿಧಿಗೆ ಹಾವನ್ನು ಕಂಡ ಮುಂಗುಸಿಗಾದಂತಾಗುತ್ತಿತ್ತು. ಹೀಗಿದ್ದ ಸಮಯದಲ್ಲಿ ಜರುಗಿದ ಆ ಒಂದು ಘಟನೆ ಇಡೀ ತಮಿಳು ನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಕರಾಳಘಟನೆಯಾಗಿ ಉಳಿದರೆ; ಅದೇ ಜಯಲಲಿತಾರ ಬದುಕಿನ ದಿಕ್ಕನ್ನೆ ಬದಲಿಸಿ ಬಿಟ್ಟಿತು ಎನ್ನುವುದು ಮಾತ್ರ ಸತ್ಯವಾಗಿತ್ತದೆ.

1989 ರ ಮಾರ್ಚ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡುವುದಕ್ಕೆ ಮುಂದಾದ ಕರುಣಾನಿಧಿಯನ್ನು ಕುರಿತು ಜಯಲಲಿತಾ ಕುಟ್ರಾಳಿ ಎಂದು ಟೇಬಲ್ ಬಡಿಯಲು ಆರಂಭಿಸಿದರು. ಕಾರಣ ಬಜೆಟ್ ಮಂಡನೆ ಮಾಡಲು ಮುಂದಾಗಿರುವ ಕರುಣಾನಿಧಿಯವರ ಪಟ್ಟಿಯಲ್ಲಿ ಕೆಲವು ಅಂಕಿ ಅಂಶಗಳು ಅದಲು ಬದಲಾಗಿದ್ದವು. ಇದನ್ನಿಟ್ಟುಕೊಂಡು ಕುಟ್ರಾಳಿ ಎಂದು ಕುಗಲು ಶುರುವಿಟ್ಟುಕೊಂಡರು. ಇದಕ್ಕೆ ಕಾಂಗ್ರೇಸ್ ಶಾಸಕರು ಕೂಡ ಸಹಕರಿಸಿದರು. ಅಷ್ಟಕ್ಕೂ ತಮಿಳಿನಲ್ಲಿ ಕುಟ್ರಾಳಿ ಎಂದರೆ ಕ್ರಿಮಿನಲ್ ಎನ್ನುವ ಅರ್ಥಕೊಡುತ್ತದೆ. ಯಾವಾಗ ತಮ್ಮನ್ನು ಕ್ರಿಮಿನಲ್ ಎಂದು ಜರಿದರೋ ಅದಕ್ಕೆ ಪ್ರತಿಯಾಗಿ ತಾನೊಬ್ಬ ಮುಖ್ಯಮಂತ್ರಿ ಎನ್ನುವುದನ್ನೂ ಮರೆತ ಕರುಣಾನಿಧಿ ನಾಲಿಗೆಯನ್ನು ಹರಿಬಿಟ್ಟರು. ಪರಿಣಾಮ ಇಡೀ ಸದನವೇ ಅಕ್ಷರಶಃ ಕುಸ್ತಿ ಮೈದಾನವಾಗಿ ಪರಿಣಮಿಸಿತು. ಒಬ್ಬರ ಮೇಲೊಬ್ಬರು ಚಪ್ಪಲಿ ಎಸೆಯುವುದು, ಅವಾಚ್ಯ ಶಬ್ದಗಳಿಂದ ನಿಂಧಿಸುವುದು ಮಾತ್ರವಲ್ಲದೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋದರು. ಎಲ್ಲ ಶಾಸಕರು ತಮ್ಮ ಜವಾಬ್ದಾರಿ ಮರೆತು ವತರ್ಿಸಿದರು. ಇದರ ಮಧ್ಯದಲ್ಲಿಯೇ ನುಗ್ಗಿಬಂದ ಶಾಸಕ ದೊರೈ ಮುರುಗನ್ ಜಯಲಲಿತಾರ ಸೆರಗಿಗೆ ಕೈ ಇಟ್ಟು ಎಳೆದು ಬಿಟ್ಟರು. ಅದ್ಯಾವ ಪರಿಯಲ್ಲಿ ನಡೆದುಕೊಂಡರೆಂದರೆ ಜಗ್ಗಿದ ರಬಸಕ್ಕೆ ಪಿನ್ನುಕಿತ್ತುಕೊಂಡು ರವಿಕೆಯೂ ಕೂಡ ಹರಿದು ಸೀರೆ ಅರೆಬರೆಯಾಗಿ ಜರಿದು ಬಿಟ್ಟಿತು. ಆ ಕ್ಷಣ ಹೇಗಿತ್ತೆಂದರೆ ದ್ರೌಪದಿಯ ಸೀರೆಯನ್ನು ದುಶ್ಯಾಸನ ಎಳೆದನೆಂಬುದನ್ನು ಓದಿದ್ದೆವು. ಆದರೆ ಇಲ್ಲಿ ಆ ಘಟನೆ ಕಣ್ಣಮುಂದೆಯೇ ಘಟಿಸಿ ಬಿಟ್ಟಿತ್ತು. ಈ ಘಟನೆಯಿಂದ ಕಂಗಾಲಾದ ಜಯಲಲಿತಾ ಆ ಕ್ಷಣದಲ್ಲಿ ಸ್ಥಂಬಿಭೂತರಾಗಿಬಿಟ್ಟರು. ಕದಡಿದ ಸೀರೆ ಹಾಗೂ ಕೆದರಿದ ಮುಡಿಯ ಜೊತೆಗೆ ಮಾಧ್ಯಮದೆದುರು ಬಂದ ಅವರು ಅಂದು ದ್ರೌಪದಿಯ ವಸ್ತ್ರಾಪಹರಣಕ್ಕೆ ಮಹಾಭಾರತದ ಆ ಸಭೆ ಸಾಕ್ಷಿಯಾಯಿತು. ಇಂದು ಆಧುನಿಕ ಭಾರತದಲ್ಲಿ ಒಂದು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಈ ಸದನ ಸಾಕ್ಷಿಯಾಗಿದೆ. ದ್ರೌಪದಿಯ ರಕ್ಷಣೆಗೆ ಕೃಷ್ಣ ಬಂದ. ಆದರೆ ನನ್ನ ರಕ್ಷಣೆಗೆ ಯಾರೂ ಬರಲಿಲ್ಲ. ಒಂದು ಹೆಣ್ಣನ್ನು ಹೀನಾಯವಾಗಿ ನಡೆಸಿಕೊಂಡ ಈ ಸದನಕ್ಕೆ ನಾನು ಮತ್ತೊಮ್ಮೆ ಬರುವುದಾದರೆ ಅದು ಮುಖ್ಯಮಂತ್ರಿಯಾಗಿಯೇ ಬರುತ್ತೇನೆ. ಆಗ ಎಷ್ಟು ಜನ ದುಶ್ಯಾಸನರು ದುಯರ್ೋದನರು ಬರುತ್ತಾರೋ ನಾನು ನೋಡಿಯೇ ತೀರುತ್ತೇನೆ. ಇಲ್ಲದೇ ಹೋದಲ್ಲಿ ನನ್ನ ಉಸಿರಿರುವ ತನಕ ಈ ಸದನದ ಮೆಟ್ಟಿಲು ಹತ್ತಲಾರೆ ಎಂದು ಹೇಳಿ ಹೊರನಡೆದ ಜಯಲಲಿತಾ ಮುಂದೆ ಮುಖ್ಯಂತ್ರಿಯಾಗಿಯೇ ಸದನಕ್ಕೆ ಕಾಲಿಡುತ್ತಾರೆ. ಅದು ಕೂಡ ಸಾಮಾನ್ಯವಾದ ಬಹುಮತದಿಂದಲ್ಲ. ಬದಲಿಗೆ ಇಡೀ ರಾಜ್ಯವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಗೆದ್ದು ಬರುತ್ತಾರೆ. ಅಂದರೆ ಇರುವ ಒಟ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಕರುಣಾನಿಧಿಯವರ ಡಿಎಂಕೆ ಗೆದ್ದರೆ, ಮಿಕ್ಕ ಎಲ್ಲ ಕ್ಷೇತ್ರಗಳಲ್ಲಿ ಜಯಲಲಿತಾ ಪಕ್ಷ ಜಯಭೇರಿ ಬಾರಿಸಿತ್ತು. ತನ್ನ ರಾಜಕೀಯ ಗುರುವಾಗಿದ್ದ ಎಂಜಿಆರ್ ಅವರನ್ನು ಮೀರಿಸುವ ಮಟ್ಟದಲ್ಲಿ ಗೆದ್ದು ಬಂದ ಜಯಲಲಿತಾ ಮುಂದೆ ತಿರುಗಿ ನೋಡಿದ ಉದಾಹರಣೆಯೇ ಇಲ್ಲ. ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಅವರು ಜಯಲಲಿತಾನಿಂದ ಜಯಮ್ಮನಾಗಿ ಇಡೀ ತಮಿಳು ನಾಡಿಗೆ ಅಮ್ಮನಾಗಿ ಮೆರೆದ ದಿನಗಳನ್ನು ನೋಡಿದರೆ ಬಹುಶಃ ಈ ರೀತಿಯ ವರ್ಚಸ್ಸನ್ನು ಸೃಷ್ಠಿಸಿಕೊಂಡ ಮಹಿಳೆ ಈ ದೇಶದಲ್ಲಿ ಇನ್ನೊಬ್ಬರು ಹುಟ್ಟುವುದಕ್ಕೂ ಸಾಧ್ಯವಿಲ್ಲವೇನೊ ಎನಿಸುತ್ತದೆ.

ಈ ವಿಷಯದ ಕುರಿತು ನನಗೆ ಓದಿದಾಗ ನಿಜಕ್ಕೂ ಆಶ್ಚರ್ಯವಾಯಿತು. ಏಕೆಂದರೆ ಈ ಜಗತ್ತು ಕೇವಲ ಸಾಧನೆಯನ್ನು ಮಾತ್ರ ಸ್ಮರಿಸುತ್ತದೆ. ಆದರೆ ಆ ಸಾಧನೆಯ ಹಿಂದಿಯ ಹಿಂದಿನ ವೇದನೆಯನ್ನು ಅದಕ್ಕಾಗಿ ಎದುರಿಸಿದ ಸವಾಲುಗಳನ್ನು ಮರೆತು ಬಿಡುತ್ತದೆ. ಅದರಲ್ಲೂ ನಾವುಗಳು ಕೇವಲ ಯಶಸ್ವಿಯಾದ ಜನಗಳ ಯಶಸ್ಸಿನ ರಹಸ್ಯವನ್ನು ಅರಿಯುವ ಬದಲು ಯಶಸ್ಸನ್ನು ನೋಡಿ ತೃಪ್ತರಾಗುತ್ತೇವೆ. ಒಂದು ವೇಳೆ ಆ ಯಶಸ್ಸಿನ ಹಿಂದೆನಿದೆ ಎಂದು ಕೇಳಿದರೆ ಅಲ್ಲೊಂದು ಕಣ್ಣೀರಿನ ಕಥೆಯೇ ತೆರೆದುಕೊಳ್ಳುತ್ತದೆ. ಯಶಸ್ಸೆಂಬ ಗುಲಾಬಿ ಹೂವಿಗೆ ಸೋಲುಗಳೆಂಬ ಮೂಳ್ಳುಗಳು ಅಂಟಿರುತ್ತವೆ ಎನ್ನುವುದನ್ನು ನಾವು ಯಾವತ್ತೂ ಲೆಕ್ಕಿಸುವುದಿಲ್ಲ. ಹೀಗಾಗಿಯೆ ನಮಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದು ಮಾತ್ರ ಮುಖ್ಯವಾಗುತ್ತದೆಯೇ ಹೊರತು ಅದಕ್ಕಾಗಿ ಅವರು ಅನುಭವಿಸಿದ ಅವಮಾನಗಳು ಮುಖ್ಯವಾಗುವುದಿಲ್ಲ. ಆ ಕಾರಣದಿಂದ ಈ ವಿಷಯ ಬಹಳ ಜನಗಳಿಗೆ ಗೊತ್ತಾಗುವುದಿಲ್ಲ. ಇದನ್ನು ಮನಗಂಡ ನಾನು ತಮ್ಮ ಜೊತೆ ಈ ವಿಷಯ ಹಂಚಿಕೊಳ್ಳಲು ಮುಂದಾದೆ. ಜಯಮ್ಮ ಕೇವಲ ತಮಿಳುನಾಡಿನ ಮುಖ್ಯಮಂತ್ರಿ ಎನ್ನುವುದಕ್ಕಿಂತ ನೊಂದ ಮಹಿಳೆಯರ ಪ್ರತಿನಿಧಿ ಎನ್ನಬಹುದು. ಏಕೆಂದರೆ ಜೀವನದಲ್ಲಿ ಆ ತಾಯಿ ಎದುರಿಸದೇ ಇರುವ ಸವಾಲುಗಳೇ ಇಲ್ಲ. ಅವರ ಶೀಲದಿಂದ ಹಿಡಿದು ಚಾರಿತ್ರ್ಯದ ತನಕ ಎಲ್ಲ ವಿಷಯದಲ್ಲೂ ಪ್ರಶ್ನೆ ಮಾಡಿದ್ದಾರೆ. ಆದರೆ ಪ್ರತಿ ಪ್ರಶ್ನೆಗೂ ಅವಳು ನೀಡುತ್ತಿದ್ದ ಉತ್ತರದಿಂದ ಎಷ್ಟೋ ಜನ ಹೇಳ ಹೆಸರಿಲ್ಲದೆ ಹೋಗಿದ್ದರೆ. ಸದನದಲ್ಲಿ ಆದ ಅವಮನಾಕ್ಕೆ ಬದಲಾಗಿ ಅವಳು ಮಾಡಿದ ಪ್ರತಿಜ್ಞೆ ಕಂಡರೆ ಪ್ರತಿಯೊಬ್ಬ ಹೆಣ್ಣುಮಗಳು ಕೂಡ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಒಬ್ಬ ದ್ರೌಪದಿಗೆ ಒಬ್ಬ ದುಶ್ಯಾಸನ ಮಾಡಿದ ಅವಮಾನಕ್ಕೆ ಕುರುಕ್ಷೇತ್ರ ಕದನವೇ ನಡೆಯಿತು. ಇಲ್ಲಿ ಒಬ್ಬ ಮಹಿಳೆಯ ಮೇಲೆ ಇಷ್ಟು ಜನರು ದಾಳಿ ಮಾಡಿದ್ದರ ಪರಿಣಾಮವಾಗಿ ತಮಿಳುನಾಡಿನ ಭವಿಷ್ಯವೇ ಬದಲಾಯಿತು. ಆ ಕಾರಣದಿಂದ ಹೇಳುತ್ತಿದ್ದೇನೆ ಅವಮಾನವಾಯಿತು ಎಂದು ಜಯಲಲಿತಾ ಮೂಲೆ ಹಿಡಿದಿದ್ದರೇ ಬಹುಶಃ ಇಂದು ಈ ವಿಚಾರವಾಗಿ ನಾನು ಬರೆಯುವ ಪ್ರಶ್ನೆಯೇ ಬರುತ್ತಿರಲಿಲ್ಲ. ಆದರೆ ಆ ಗಟ್ಟಿಗಿತ್ತಿ ಅವಮಾನವಾದ ಜಾಗದಲ್ಲಿ ಸನ್ಮಾನ ಪಡೆದುಕೊಳ್ಳುತ್ತಾಳೆಂದರೆ ಅವಳ ಹೋರಾಟದ ಹಾದಿಯು ನಮ್ಮ ನಾರಿಮಣಿಗಳಿಗೆ ಮಾದರಿಯಾಗುವುದಿಲ್ಲವೆ? 

ಮೇಲಾಗಿ ರಾಜ್ಯ ರಾಜಕಾರಣವನ್ನು ಸರಿಯಾಗಿ ನೋಡಿದಲ್ಲಿ ಇತ್ತೀಚೆಗೆ ಮಹಿಳೆಯರನ್ನು ನಿಂದಿಸುವುದು, ಅವಾಚ್ಯ ಪದಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅಂಥ ರಾಜಕಾರಣಿಗಳಿಗೆ ಜಯಮ್ಮನ ಸಾಧನೆಯ ಹಾದಿ ತಿಳಿಸಿಕೊಟ್ಟರೆ ಒಳಿತು ಎಂದು ನನಗನಿಸುತ್ತದೆ. ನೀವು ಹೀಗೆ ನಾಲಿಗೆ ಹರಿಬಿಡುತ್ತ ಸಾಗಿದರೆ ನಿಮಗೂ ಕೂಡ ಸೋಲು ಶಾಶ್ವತವಾಗಿ ಅಧೀಕಾರದ ಅಸೆ ಮಣ್ಣು ಸೇರಬಹುದು ಎಂಬ ಸತ್ಯವನ್ನು ಅರ್ಥ ಮಾಡಿಸಬಹುದಾಗಿದೆ. ಇದರ ಜೊತೆಗೆ ಸಣ್ಣ ಸಣ್ಣ ಸೋಲುಗಳಿಗೆ ಸಾವಿನ ದಾರಿ ಹಿಡಿಯುವ ಮಹಿಳೆಯರಿಗೆ ಜಯಲಲಿತಾರ ಬದುಕು ಒಂದು ದಾರಿ ದೀಪವಾಗುತ್ತದೆ. ಬದುಕಿನುದ್ದಕ್ಕೂ ಏಕಾಂಗಿಯೇ ಉಳಿದ ಜಯಮ್ಮ ಸಾವಿನ ನಂತರದ ಸಾರ್ಥಕ ಸ್ಥಾನವನ್ನು ಪಡೆದುಕೊಳ್ಳುತ್ತಾಳೆ. ಅವಳ ಸಾವಿಗೆ ಇಡೀ ರಾಜ್ಯವೇ ಕಣ್ಣಿರಿಡುತ್ತದೆ ಎಂದರೆ ನಿಜಕ್ಕೂ ಅವಳು ಅದೆಂತ ಆಡಳಿತ ಕೊಟ್ಟಿರಬೇಕು ನೀವೇ ಊಹಿಸಿ. ಅವರ ಮೇಲೂ ಆಪಾದನೆಗಳಿದ್ದವು ಎನ್ನುವುದನ್ನು ಕೊಂಚ ಬದಿಗಿಟ್ಟು ಅವರ ಹೋರಾಟದ ಬದುಕನ್ನಷ್ಟೆ ನೋಡಿದರೆ ನಿಜಕ್ಕೂ ಆ ಮಹಿಳೆಯ ಹೋರಾಟ ನಿಜಕ್ಕೂ ಆದರ್ಶವಾಗುತ್ತದೆ. ಸೋಲು ಗೆಲವು ಎನ್ನುವುದು ಸಾಮಾನ್ಯ ಆದರೆ ಬದುಕಲ್ಲಿ ಸೋತು ಮತ್ತೆ ಗೆಲ್ಲುವುದಿದೆಯಲ್ಲ ಅದು ಅಸಾಮಾನ್ಯ. ಅದೇ ಕಾರಣಕ್ಕೆ ಜಯಲಲಿತಾ ಅವರ ಬದುಕು ನಮಗೆ ಇಷ್ಟವಾಗುತ್ತದೆ. ಮತ್ತೆ ಮತ್ತೆ ಅವರ ನೆನಪು ನಮ್ಮನ್ನು ಕೆಣಕುತ್ತದೆ. ಸೋತ ಮಹಿಳೆಗೆ ಇವರ ಬದುಕನ್ನು ತೋರಿಸಿದರೆ ಜೀವನದಲ್ಲಿ ಗೆಲ್ಲುವ ಉತ್ಸಾಹ ಮೂಡುತ್ತದೆ. ನಾಲಿಗೆ ಹರಿ ಬಿಡುವ ನಾಯಕರಿಗೆ ಇದು ಎಚ್ಚಿರಕೆ ನೀಡುತ್ತದೆ. ಏಕೆಂದರೆ ದ್ರೌಪದಿಯ ಸೀರೆಗೆ ಕೈಯಿಟ್ಟು ಮಹಾಭಾರತ ಜರುಗಿತು, ಹಾಗೆಯೇ ಜಯಮ್ಮನ ಸೆರಗಿಗೆ ಕೈಯಿಟ್ಟು ಡಿಎಂಕೆ ಧೂಳಿಪಟವಾಯಿತು. ಅಲ್ಲವೇ?

User profile picture

- ಮಂಜುನಾಥ ಜುನಗೊಂಡ, ವಿಜಯಪುರ