ಭಾವನಾತ್ಮಕವಾಗಿ ಬೆಸೆಯುವ ಬಹುಮುಖ ಬರಹಗಳು


ಪುತ್ತೂರು ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಕವಯಿತ್ರಿ, ಲೇಖಕಿ ಜೆಸ್ಸಿ ಪಿ.ವಿ.  ಅವರು 'ಚಿಮಣಿ ದೀಪದ ಸ್ವಗತ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಇದು ಅವರ ಐದನೇಯ ಸಂಕಲನ. ಅತ್ಯಂತ ಸರಳ ಶೈಲಿಯಲ್ಲಿ ಓದುಗರ ಗಮನ ಸೆಳೆಯುವಂತೆ ಬರೆಯುವ ಲೇಖಕಿ, ಒಂದು ಲೇಖನಕ್ಕೆ ಮಾಡಿಕೊಳ್ಳುವ ತಯಾರಿ, ವಿಷಯ ಸಂಗ್ರಹ, ನಿರೂಪಿಸುವ ವಿಧಾನ, ಅಲ್ಲಲ್ಲಿ ಕೊಡುವ ಸೂಕ್ತವೆನಿಸುವ ಉದಾಹರಣೆಗಳು ಹೊಚ್ಚ ಹೊಸತನದಿಂದ ಕೂಡಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುವ ಆಕರ್ಷಣೀಯ ಶೈಲಿಯಲ್ಲಿವೆ. ಸಂಕಲನದಲ್ಲಿ 32 ವಿಭಿನ್ನ ವಿಷಯವಸ್ತುಗಳುಳ್ಳ ಪ್ರಬಂಧಗಳಿವೆ. ಬದುಕಿನ ಏಕತಾನತೆ, ದಾಂಪತ್ಯ ಜೀವನದ ಏಳು-ಬೀಳು, ಪ್ರತಿಷ್ಠೆಗಾಗಿ ಮಾಡುವ ದುಂದುವೆಚ್ಚದ ಮದುವೆ, ಬಾಲ್ಯಕಾಲದ ಸುಮಧುರ ನೆನಪುಗಳು, ಆರೋಗ್ಯಕರ ಬದುಕಿಗೆ ಅಳವಡಿಸಿಕೊಳ್ಳಬಹುದಾದ ಸಲಹೆಗಳು, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ಅಂಶಗಳು ಹೀಗೆ ಥರಹೇವಾರಿ ಹೊಸತನದಿಂದ ಕೂಡಿದ ಲೇಖನಗಳಿವೆ.

ಸಂಕಲನಕ್ಕೆ ಮೊದಲ ಮಾತುಗಳನ್ನಾಡಿದ ನರೇಂದ್ರ ರೈ ದೇರ್ಲ ಅವರು ಹೇಳುವಂತೆ ಜೆಸ್ಸಿಯವರದ್ದು ಸೊಗಸಾದ ಭಾಷೆ. ಪ್ರಬಂಧಕ್ಕೆ ಒಗ್ಗುವಂತಿದೆ. ಇಲ್ಲಿಯ ಎಲ್ಲಾ ಬರಹಗಳೂ ಅವರ ವಿಶಿಷ್ಟ ನಿರೂಪಣಾ ಶಕ್ತಿಯಿಂದ ಅದಾಗಿಯೇ ಓದಿಸಿಕೊಂಡು ಹೋಗುತ್ತವೆ. ಲೇಖಕಿಗೆ ಗ್ರಾಮ ಬದುಕಿನ ಬಗ್ಗೆ ಕಳಕಳಿ, ಪ್ರೀತಿಯಿದೆ. ಮಾನವೀಯತೆ, ಸಾಮರಸ್ಯ, ಸಹಬಾಳ್ವೆ, ಸಹಮತದ ಭಾವವು ನಿಧಾನವಾಗಿ ಹಾಳಾಗುತ್ತಿದೆಯಲ್ಲ ಎಂಬ ನೋವು ಇದೆ. ನಿರ್ಲಕ್ಷಿತ, ನಗಣ್ಯ ಎನಿಸಿದ ವಸ್ತುಗಳ ಅಂತರಂಗ ಹೊಕ್ಕು ಒಳಿತನ್ನು ಹೆಕ್ಕಿ ತೆಗೆಯುವ ಸಂವೇದನೆವುಳ್ಳ ಪ್ರಬುದ್ಧ ಲೇಖಕಿಯಂತೆ ಜೆಸ್ಸಿಯವರು ನಮಗೆ ಕಾಣಿಸುತ್ತಾರೆ.

ಮಾಮೂಲಿಯ ಏಕತಾನತೆಯ ಬದುಕಿಗೆ ಒಂದಿಷ್ಟು ವ್ಯತ್ಯಾಸ ಬರುವುದು ಯಾವಾಗ ಗೊತ್ತೆ? ನಮ್ಮ ನಮ್ಮ ಮನೆಗೆ ನೆಂಟರು ಬಂದಾಗ. ನಿತ್ಯ ಇರುವ ವಾತಾವರಣಕ್ಕಿಂತ ವಿಭಿನ್ನವಾದ ಸನ್ನಿವೇಶ ಸೃಷ್ಟಿಯಾಗುವುದು ಆಗಲೇ. ಅಂತಹ ಸಂದರ್ಭದ ಪೂರಕ ಸಂಗತಿಗಳನ್ನೆಲ್ಲ ಸಂಕಲನದ ಮೊದಲ ಪ್ರಬಂಧ 'ಮನೆಗೆ ನೆಂಟರು ಬರುವ ಸಂಭ್ರಮ' ಕಟ್ಟಿಕೊಡುತ್ತದೆ. ಸ್ವಚ್ಛತಾ ಕಾರ್ಯ, ಸ್ಪೆಷಲ್ ಅಡುಗೆ, ಕಷ್ಟ-ಸುಖಗಳ ವಿನಿಮಯ, ಮಕ್ಕಳ ಮೊಗದಲ್ಲಿ ಇಷ್ಟಗಲ ಅರಳಿದ ನಗೆ ಎಲ್ಲವೂ ಮನೆಗೆ ಅಪರೂಪಕ್ಕೆ ಭೇಟಿ ಕೊಡುವ ನೆಂಟರ ಕಾರಣದಿಂದಲೇ ಸಾಧ್ಯ. ಆದರೀಗ ಆಧುನಿಕ ಕುಟುಂಬಗಳು ಇಂತಹ ಸಂತಸದಿಂದ ವಿಮುಖವಾಗುತ್ತಿರುವುದು ವಿಪಯರ್ಾಸ. ಮಕ್ಕಳಿಗೆ ಸಂಬಂಧಗಳ ಬೆಲೆಯನ್ನು ತಿಳಿಸುವುದಕ್ಕೋಸ್ಕರವಾದರೂ ನೆಂಟರನ್ನು ಮನೆಗೆ ಬರಮಾಡಿಕೊಳ್ಳುತ್ತಿರಬೇಕು ಅಥವಾ ನಾವೇ ಅವರ ಮನೆಗೆ ಭೇಟಿ ಕೊಡಬೇಕು ಎನ್ನುತ್ತಾರೆ ಲೇಖಕಿ. ಅತಿಥಿ ಸತ್ಕಾರ ಹೇಗಿರಬೇಕು ಎಂಬುವುದಕ್ಕೆ ಒಂದಿಷ್ಟು ಉಪಯುಕ್ತ ಸಲಹೆಗಳನ್ನು ನೀಡುವ ಲೇಖನ 'ಅತಿಥಿ ಸತ್ಕಾರ ಆಪ್ತವಾಗಿರಲಿ'. ಭಾರತ ದೇಶ ಅತಿಥಿ ಸತ್ಕಾರಕ್ಕೆ ವಿಶ್ವವಿಖ್ಯಾತವಾದುದು. 'ಅತಿಥಿ ದೇವೋಭವ' ಎನ್ನುತ್ತಲೇ ಮನೆಗೆ ಬಂದವರನ್ನು ದೇವರಂತೆ ಸತ್ಕರಿಸಿ, ಉಪಚರಿಸುವ ನಮ್ಮ ಸಂಸ್ಕೃತಿ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ.

ಕವಿ, ಲೇಖಕ ಒಮ್ಮೊಮ್ಮೆ ಪರಕಾಯಪ್ರವೇಶ ಮಾಡಬೇಕಾಗುತ್ತದೆ. ವ್ಯಕ್ತಿ ಇರಬಹುದು, ವಸ್ತು ಇರಬಹುದು ಅದರೊಳಗಿನ ನೋವು-ನಲಿವು, ಮನದ ಮಾತುಗಳನ್ನು ಆಲಿಸಲು ಸೂಕ್ಷ್ಮ ದೃಷ್ಟಿಕೋನ ಬೇಕು. ಅಂತಹ ಸಾಧ್ಯತೆಯನ್ನು 'ಚಿಮಣಿ ದೀಪದ ಸ್ವಗತ' ಲೇಖನದಲ್ಲಿ ನಾವು ಕಾಣಬಹುದು. ಹಳೆಯ ಕಾಲದಲ್ಲಿ ಬಳಸಲ್ಪಡುತ್ತಿದ್ದ ಚಿಮಣಿಯೊಂದು ಇದ್ದಕ್ಕಿದ್ದಂತೆ ನಮ್ಮ ಜೊತೆ ಮಾತಾಡುತ್ತಿದೆಯೇನೋ ಎಂಬಂತೆ, ಕಣ್ಣಿಗೆ ಕಟ್ಟುವಂತೆೆ ಲೇಖಕಿ ಬಣ್ಣಿಸುತ್ತ ಹೋಗುತ್ತಾರೆ. ಆಧುನಿಕ ಆವಿಷ್ಕಾರಗಳ ಭರಾಟೆಯಲ್ಲಿ ಬದುಕಿಗೆ ತೀರಾ ಹತ್ತಿರವಿದ್ದ ವಸ್ತುಗಳು ಹೇಗೆ ಕಣ್ಮರೆಯಾಗುತ್ತಿವೆ? ಮ್ಯೂಸಿಯಂ ಸೇರುತ್ತಿವೆ ಎಂಬುದನ್ನು ಅರ್ಥಪೂರ್ಣವಾಗಿ ಲೇಖಕಿ ನಿರೂಪಿಸಿದ್ದಾರೆ. ಎಲ್ಲರೂ ಒಮ್ಮೆ ಓದಲೇಬೇಕಾದ ಪ್ರಬಂಧವಿದು. ನೀವು ರೇಡಿಯೋ ಪ್ರಿಯರಾಗಿದ್ದರೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ವಾತರ್ೆಗಳಿಗೆ ಕಿವಿಯಾಗಿರುತ್ತೀರಿ. ಅದೊಂದು ಕಾಲವಿತ್ತು, ರೇಡಿಯೋ ನಮ್ಮ ಬದುಕಿನ ಪುಟ್ಟ ಜಗತ್ತಾಗಿತ್ತು. ವಾತರ್ೆ, ಹಾಡು, ನಾಟಕ, ಕತೆ, ಕವಿತೆ, ಕೃಷಿ ಎಲ್ಲವೂ ಅಲ್ಲಿ ಬಿತ್ತರವಾಗುತ್ತಿದ್ದವು. ಬೇಸರ, ಆಯಾಸಗಳನ್ನು ನೀಗಲೊಂದು ಮನರಂಜನಾ ಸಾಧನವಾಗಿ ನಮ್ಮ ಜೊತೆ ಜೊತೆಗೆ ಬರುತ್ತಿದ್ದ ರೇಡಿಯೋ ಕೂಡ ಇಂದು ಮೂಲೆಗುಂಪಾಗಿದೆ. ಅಂತಹ ರಸಮಯ ಸಂದರ್ಭದ ಸಂಗತಿಗಳನ್ನೆಲ್ಲಾ 'ಆಕಾಶವಾಣಿ ವಾತರ್ೆಗಳು ಓದುತ್ತಿರುವವರು ರಂಗರಾವ್...' ಲೇಖನ ಕಟ್ಟಕೊಡುತ್ತದೆ.

ಸುಮಧುರ ದಾಂಪತ್ಯಗಳು ಇಂದು ಸಣ್ಣ ಸಣ್ಣ ಕಾರಣಕ್ಕೆ ಬಿರುಕಾಗುತ್ತಿವೆ. ಸ್ವರ್ಗದ ತಾಣವಾಗಬೇಕಿದ್ದ ಮನೆ ಅಕ್ಷರಶಃ ನರಕವಾಗಲು ಕಾರಣ ಗಂಡ-ಹೆಂಡತಿಯರಲ್ಲಿರುವ ಅಹಮಿಕೆ. ಒಬ್ಬ ಕವಿ ಹೇಳುತ್ತಾನೆ, 'ಮನೆಯ ತಲಬಾಗಿಲಲ್ಲಿ ಒಣಗಿದರೆ ತೋರಣ ನಾನಷ್ಟೇ ಅಲ್ಲ ಅದಕ್ಕೆ ನೀನು ಕಾರಣ' ಎಂತಹ ಸತ್ಯದ ಮಾತಲ್ಲವೇ? ಇಂತಹ ಸಣ್ಣತನಗಳನ್ನು ಕಡಿಮೆ ಮಾಡಿಕೊಂಡು ಸಂತೋಷದಿಂದ ಬದುಕಲು ಪ್ರಯೋಜನಕಾರಿ ಲೇಖನ 'ದಾಂಪ್ತಯ ಜೀವನ ಶ್ರುತಿ ಸೇರದ ಸಂಗೀತವಾಗದಿರಲಿ'. 

ಬೆಳೆಯುವ ಮಕ್ಕಳ ಅಕಾಲಿಕ ಸಾವುಗಳು ಇಂದು ಹೆತ್ತವರನ್ನು ತೀರಾ ಕಂಗೆಡಿಸಿವೆ. ಅದಕ್ಕೆ ಕಾರಣವಾದರೂ ಏನು? ಅವಶ್ಯಕತೆ ಇದೆಯೋ, ಇಲ್ಲವೋ? ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ ಕೃತಾರ್ಥರಾಗುವ ಪಾಲಕರು, ಅಂಕೆಯಿಲ್ಲದೆ ಮೋಜಿನಲ್ಲಿ ಮುಳುಗಿ ಬದುಕನ್ನೇ ಕೊನೆಗೊಳಿಸಿಕೊಳ್ಳುವ ಮಕ್ಕಳು. ಇದರಲ್ಲಿ ತಪ್ಪು ಯಾರದ್ದು ಎಂದು ಕಂಡುಹಿಡಿಯಬೇಕಾದರೆ 'ಮಕ್ಕಳ ಮನದಳಲು ಕೇಳಲು ನಿಮಗೆ ಕಿವಿಗಳಿರಲಿ..' ಲೇಖನ ಓದಬೇಕು.

ಮೂಲೆ ಸೇರುವ ಪೊರಕೆ ಜುಜುಬಿ ವಸ್ತುವಲ್ಲ, ಯಾಂತ್ರಿಕ ಲೋಕದಲ್ಲಿ ಯಂತ್ರದಂತಹ ಬದುಕು, ಈಗ ಎಲ್ಲೆಲ್ಲೂ ರೆಡಿಮೇಡ್ ಮದುವೆಯೇ, ಕಿಟಕಿ ಬದಿಯ ಸೀಟು, ಅಸೂಯೆಯ ಕಿಚ್ಚಿನಲ್ಲಿ ಸ್ವಯಂ ಸುಟ್ಟು ಹೋಗದಿರಿ ಹೀಗೆ ಸಂಕಲನದ ಸಾಕಷ್ಟು ಪ್ರಬಂಧಗಳು ಓದಿಸಿಕೊಳ್ಳುತ್ತಾ, ನಮ್ಮಲ್ಲಿನ ಋಣಾತ್ಮಕ ಆಲೋಚನೆಗಳನ್ನು ಕಳೆದು ಹಾಕಿ ಧನಾತ್ಮಕ ಅಂಶಗಳ ಬೆಳವಣಿಗೆಗೆ ಪ್ರೇರಣೆ ನೀಡುತ್ತವೆ.  

ಪ್ರತಿ ಪ್ರಬಂಧಕ್ಕೂ ಲೇಖಕಿ ಜೆಸ್ಸಿ ಅವರು ಮಾಡಿಕೊಂಡಿರುವ ಸಿದ್ಧತೆ, ಅಧ್ಯಯನ, ಅನುಭವ, ಸೂಕ್ತ ಉದಾಹರಣೆಗಳು ಮೆಚ್ಚುಗೆಗೆ ಅರ್ಹವೆನಿಸುತ್ತದೆ. ತನ್ನ ಸುತ್ತಣ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸುವ ಜೆಸ್ಸಿಯವರು ಅತ್ಯಂತ ಶೃದ್ಧೆ, ಸಹನೆಯಿಂದ ಓದುಗರ ಅಭಿರುಚಿಗೆ ತಕ್ಕಂತೆ ಬರೆಯಬಲ್ಲರು. ಓದುಗನನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುವ ಬರಹಗಳನ್ನು ನೀಡಿದ ಜೆಸ್ಸಿ ಪಿ.ವಿ. ಅವರಿಗೆ ಅಭಿನಂದಿಸುವೆ.  

ಚಿಮಣಿ ದೀಪದ ಸ್ವಗತ-ಪ್ರಬಂಧ ಸಂಕಲನ

ಲೇಖಕರು- ಜೆಸ್ಸಿ ಪಿ. ವಿ

ಪ್ರಕಾಶನ: ಸಾಧನ ಪಬ್ಲಿಕೇಷನ್ ಬೆಂಗಳೂರು

ವರ್ಷ-2018  ಪುಟಗಳು- 128  ಬೆಲೆ-100/-

 

User profile picture

ನಾಗೇಶ್ ಜೆ. ನಾಯಕ