ಸಾಮಾಜಿಕ ಪ್ರಜ್ಞೆ ಮತ್ತು ಒಲವಿನ ನವಿರು ಭಾವ ಹೊರಸೂಸುವ ಗಜಲ್ಗಳು


'ಎಲ್ಲರನು ಎಲ್ಲವನು ಸುಮ್ಮನೆ ಪ್ರೀತಿ ಮಾಡೋಣ ಬಾ ಸಖಿ' ಎಂದು ವಿನಾಕಾರಣ ಎಲ್ಲರನ್ನೂ ಪ್ರೀತಿಸುತ್ತ, ಮನುಷ್ಯ ಪ್ರೀತಿ ಹಂಚುವ ಕವಿ ಸಿದ್ಧರಾಮ ಹೊನ್ಕಲ್ ತಮ್ಮ ಪ್ರಪಥಮ ಗಜಲ್ ಸಂಕಲನ 'ಆಕಾಶಕ್ಕೆ ಹಲವು ಬಣ್ಣಗಳು' ಪ್ರಕಟಿಸಿದ್ದಾರೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ಇವರು ಗಜಲ್ ಕೃಷಿಯತ್ತ ವಾಲಿಕೊಂಡಿರುವುದು ಖುಷಿಯ ಸಂಗತಿ. ಗಜಲ್ ಪ್ರಕಾರವೇ ಹಾಗೆ, ಒಮ್ಮೆ ಅದರ ಮೋಡಿಗೆ ಒಳಗಾದಲ್ಲಿ ಹೊರಬರುವ ಪ್ರಮೇಯವೇ ಇಲ್ಲ. ತುಂಬ ಸರಳವಾಗಿ ಗಜಲ್ನ ಎಲ್ಲ ನಿಯಮಗಳನ್ನು ಒಳಗೊಂಡು ಬರೆದ 50 ಗಜಲ್ಗಳು ಈ ಸಂಕಲನದಲ್ಲಿವೆ. ಗಜಲ್ ಎಂದರೆ ಹಾಗೆ; ಜಗದ ಕಣ್ಣೀರಿಗೆ ಕರಗುವುದಷ್ಟೇ ಅಲ್ಲ, ಇಹದ ಹಂಗು ಹರಿದು ತೀವ್ರ ಅಲೌಕಿಕ ಸೆಳೆತದ ಕಡೆಗೆ ಸೆಳೆದೊಯ್ಯುವುದು. ಅಂತಹ ಪ್ರಯತ್ನಗಳು ಈ ಸಂಕಲನದಲ್ಲಿ ಕಾಣಬಹುದು. ಇಡೀ ಗಜಲ್ಗಳಲ್ಲಿ ಪಕ್ವಗೊಂಡ ಬದುಕಿನ ಅನುಭವಗಳು, ವ್ಯವಸ್ಥೆಯ ವ್ಯಂಗ್ಯ, ತೀವ್ರ ಬದುಕಿನ ಪ್ರೀತಿ ಎಲ್ಲವೂ ಹರಳುಗಟ್ಟಿದೆ. ವಿರಹ, ಅನುರಾಗ, ಸಾಕಿಯ ಸಾಂಗತ್ಯದ ಒಲವು, ಗೆಳೆಯನಿಗೆ ಹೇಳುವ ಬುದ್ಧಿಮಾತು ಗಜಲ್ಗಳಾಗಿ ಕಾಡುತ್ತವೆ.

ಮೊದಲ ನುಡಿಗಳನ್ನಾಡಿದ ಹಿರಿಯ ಕವಯಿತ್ರಿ ಶಶಿಕಲಾ ವಸ್ತ್ರದ ಹೇಳುವಂತೆ ಉತ್ಕಟ ಜೀವನೋತ್ಸಾಹ, ಸೋತವರಿಗೆ ನೀಡಬಲ್ಲ ಹೊಸ ಹುಮ್ಮಸ್ಸು, ದಿವ್ಯ ಪ್ರೇಮದರ್ಶನ, ಜೀವನ ಪ್ರೀತಿಯನ್ನು ತುಂಬುವ ಸದಾಶಯ, ಸಾಮರಸ್ಯದ ತೀವ್ರ ತುಡಿತ, ಕಾಮಾಂಧರ ಕುರಿತಾದ ಆಕ್ರೋಶ, ಬಲಿಷ್ಠ ಭಾರತವನ್ನು ಕಟ್ಟುವ ಅದಮ್ಯ ಉತ್ಸಾಹಗಳು ಸಿದ್ಧರಾಮ ಹೊನ್ಕಲ್ ಅವರ ಈ ಗಜಲ್ ಸಂಕಲನದಲ್ಲಿವೆ. ಮಾನವ ಪ್ರೇಮ, ಮಾನವೀಯತೆಗಳ ಸಾಂಗತ್ಯವನ್ನು ಕವಿ ಇಲ್ಲಿ ಹೃದಯಸ್ಪಶರ್ಿಯಾಗಿ ಕಟ್ಟಿಕೊಟ್ಟಿದ್ದಾರೆ.

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು ತಮ್ಮ ಒಂದು ಕವಿತೆಯಲ್ಲಿ 'ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ' ಎನ್ನುತ್ತಾರೆ. ದೇವರ ಸಾಕ್ಷಾತ್ಕಾರಕ್ಕೆ ನಿರಂತರ ಹುಡುಕಾಟದಲ್ಲಿರುವ ಮನುಷ್ಯ ಗುಡಿ, ಗೋಪುರ, ಚರ್ಚ್ , ಇಗರ್ಜ , ಮಸೀದಿ ಎಲ್ಲವನ್ನು ನಿಮರ್ಿಸಿದ್ದಾನೆ. ಆದರೆ ಇಲ್ಲಿಯವರೆಗೂ ಅಲ್ಲಿ ಮನುಷ್ಯ ಪ್ರೀತಿಯನ್ನು, ಸಾಮರಸ್ಯದ ಬದುಕನ್ನು ಪ್ರತಿಷ್ಠಾಪಿಸಲು ಅವನಿಗೆ ಆಗಿಲ್ಲ. ಹಾಗೆಂದೇ ಕವಿ ಸಿದ್ಧರಾಮ ಅವರು ಏನೆಲ್ಲ ಇದೆ ಅಲ್ಲಿ ಆದರೆ ಅದೊಂದರ ಕೊರತೆ ಎದ್ದು ಕಾಣುತ್ತಿದೆ ಎಂಬ ಕೊರಗನ್ನು ವ್ಯಕ್ತಪಡಿಸುತ್ತಾರೆ.

ಇಲ್ಲಿ ಗುಡಿ ಗೋಪುರ ಮಸೀದಿ ಚರ್ಚ್  ಎಲ್ಲವೂ ಇವೆ

ಆದರೆ ಅಲ್ಲಿರಬೇಕಾದ ಅದೊಂದು ಮಾತ್ರ ಗೋಚರಿಸುತ್ತಿಲ್ಲ

ನುಡಿಯುವುದು ಸುಲಭ, ಆದರೆ ನುಡಿದಂತೆ ನಡೆಯುವುದು ಅಷ್ಟು ಸುಲಭವೇ? ಖಂಡಿತಾ ಇಲ್ಲ. ಅದರಲ್ಲೂ ಪ್ರೀತಿ, ವಿರಹದ ಸನ್ನಿವೇಶ, ದುಡುಕಿನಲಿ ಏನೆಲ್ಲ ಅಂದುಬಿಡುತ್ತೇವೆ ಆದರೆ ಅದನ್ನು ಅಳವಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಪ್ರೀತಿಯೇ ಹೀಗೆ, ಯಾರನ್ನು ಮರೆಯಬೇಕೆಂದುಕೊಳ್ಳುತ್ತೇವೆಯೋ ಅವರನ್ನೇ ಪದೆ ಪದೆ ನೆನಪಿಸಿಕೊಳ್ಳುತ್ತೇವೆ. ಅದಕ್ಕೆಂದೇ ಕವಿ ಇಲ್ಲಿ ನನ್ನ ತೊರೆದು ಹೋಗಿಬಿಡು ಎಂದು ಹೇಳುವುದು ಸರಳ. ಆದರೆ ಮನಸಿಂದ ದೂರಮಾಡೋದು ತುಂಬಾ ಕಷ್ಟ ಎನ್ನುತ್ತಾರೆ.

ಹೋಗಿಬಿಡು ಅಂದಷ್ಟು ಸುಲಭವೇ ನಿನ್ನಿಂದ ದೂರ ಹೋಗುವುದು

ಹೇಳುವುದು ಸುಲಭ ಹೇಳಿದಷ್ಟೇ ಸಹಜವಲ್ಲ ಮನಸ್ಸಿಂದ ಕಳಚುವುದು

ಇದು ವರ್ಣನೆಗೆ ನಿಲುಕದ, ಹೋಲಿಕೆಗೂ ದಕ್ಕದ ಅತ್ಯಂತ ದುರಿತ ಕಾಲ. ನೋವೆಂಬ ನೋವು ಕಣ್ಣೀರ ಪಸೆಯನ್ನು ತೋರಗೊಡದೆ ಒಳಗೊಳಗೆ ವಿಜೃಂಭಿಸುವ ಕಾಲ. ಕರೋನಾ ವೈರಸ್ ಮಹಾಮಾರಿ ಜಗತ್ತನ್ನು ಕಾಡಿದಷ್ಟು ಬೇರಿನ್ಯಾವ ರೋಗವೂ ಕಾಡಿಲ್ಲ. ನಂತರ ವಕ್ಕರಿಸಿದ್ದು ನೆರೆಹಾವಳಿ. ಸರಣಿ ವಿಕೋಪಗಳು ಮನುಕುಲವನ್ನು ಹಣಿದು ಹೈರಾಣಾಗಿಸಿವೆ. 'ಯಾವ ಹಾಡ ಹಾಡಲಿ, ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ' ಎಂದು ಕವಿ ತನ್ನನ್ನೇ ತಾನು ಕೇಳಿಕೊಳ್ಳಬೇಕಾದ ಸಂಕಟದ ಸಂದರ್ಭ. ಅದಕ್ಕೆ ಕವಿ ತನ್ನ ಒಳಗಿನ ಸಂಕಟವನ್ನು ಈ ಗಜಲ್ನಲ್ಲಿ ದಾಟಿಸುತ್ತಾನೆ.

ಇಲ್ಲಿ ಮನೆ ಹತ್ತಿ ಉರಿದರೆ ನಿಲ್ಲಬಹುದಲ್ಲವೆ

ಧರೆಗೆ ಹತ್ತಿದ ಈ ದಾವಾನಲ ಆರುತ್ತಲೆ ಇಲ್ಲ ಗೆಳೆಯಾ

ಏನೂ ಅರಿಯದ ಹಸುಳೆಯ ಮೇಲೂ ಕಾಮುಕರ ಕಾಕದೃಷ್ಟಿ ಬಿದ್ದು ಜೀವ ವಿಲವಿಲಗೊಳ್ಳುತ್ತಿರುವ ದುರ್ಜನಗಳಿವು. ಇಂತಹ ಪೈಶಾಚಿಕ ಕೃತ್ಯಗಳಿಗೆ ಮೊದಲು ಸ್ಪಂದಿಸುವುದು ಕವಿಮನವೇ. 'ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ' ಎಂದ ಕವಿ, ಕಣ್ಣೆದುರೇ ಇಂತಹ ಅಮಾನವೀಯ ಘಟನೆ ಕಂಡು ಹೇಗೆ ತಾನೇ ಸುಮ್ಮನಿರುವುದು. ಜಗದ ನೋವನ್ನೆಲ್ಲ ಗಂಟಲಿಗೆ ಬಸಿದು ಹಾಡಾಗಿಸುವ ಹರಕತ್ತು ಇಂದು ಕವಿಗಳ ಮೇಲಿದೆ. ಹಾಗಾಗಿಯೇ ಕವಿ ಸಿದ್ಧರಾಮ ಹೊನ್ಕಲ್ ತಮ್ಮ ಒಂದು ಗಜಲ್ನಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರವನ್ನು ಕಂಡು ಹೀಗೆ ಹೇಳುತ್ತಾರೆ.

ಎಲ್ಲೆಂದರಲ್ಲಿ ಒಂಟಿಯಾಗಿ ಕೂಡದಿರು ಮಗುವೆ ಕಾಡು ಮೃಗಗಳಿವೆ

ಬೇಕೆಂದಲ್ಲಿ ಬೇಕಾದಾಗ ಹೋಗದಿರು ಮಗುವೆ ಕಾಡು ಪಶುಗಳಿವೆ 

ಇಂತಹ ಎಷ್ಟೋ ಗಜಲ್ ಶೇರ್ಗಳನ್ನು ಈ ಸಂಕಲನದಲ್ಲಿ ನಾವು ಕಾಣಬಹುದು. ಚಿದಾನಂದ ಸಾಲಿ ಅವರು ಹೇಳುವಂತೆ ಹೊನ್ಕಲ್ ಅವರ ಗದ್ಯ ಬರವಣಿಗೆಯಲ್ಲಿನ ಶೈಲಿಯ ಪ್ರಭಾವ ಈ ಗಜಲ್ಗಳ ಮೇಲೂ ಆಗಿದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ವಾಚ್ಯತೆಯನ್ನು ಮೀರಿದಾಗಲೇ ಸುಲಲಿತವಾಗಿ ಗಜಲ್ ಓದಿಸಿಕೊಂಡು ಹೋಗುತ್ತದೆ. ಮುಂದಿನ ಗಜಲ್ ಸಂಕಲನಗಳಲ್ಲಿ ಅದನ್ನು ಮೀರಿ ನಿಲ್ಲುತ್ತಾರೆ ಎನ್ನುವ ಭರವಸೆ ಇಟ್ಟುಕೊಂಡು, ಅವರ ಮೊದಲ ಗಜಲ್ ಸಂಕಲನಕ್ಕೆ ಶುಭ ಕೋರುತ್ತೇನೆ.  

 

User profile picture

ನಾಗೇಶ್ ಜೆ. ನಾಯಕ