ಕ್ಯೂಬಾದ ವಿಮಾನ ನಿಲ್ದಾಣಗಳಿಗೆ ಅಮೆರಿಕದ ವಿಮಾನ ಹಾರಾಟ ರದ್ದು

    ವಾಷಿಂಗ್ ಟನ್, ಅ 26:    ಹವಾನಾ ಹೊರತುಪಡಿಸಿ ಕ್ಯೂಬಾದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹಾರಾಟ ನಡೆಸುವ ಅಮೆರಿಕದ ವಿಮಾನಗಳನ್ನು ರದ್ದುಪಡಿಸುವುದಾಗಿ ಅಮೆರಿಕ ತಿಳಿಸಿದೆ.    ಅಮೆರಿಕದ ವಾಯು ಪ್ರಯಾಣದಿಂದ ಕ್ಯೂಬಾ ಸರ್ಕಾರ ಲಾಭ ಪಡೆಯುವುದನ್ನು ತಡೆಯಲು, ಕ್ಯೂಬಾದ ಮೇಲೆ ಒತ್ತಡ ಹಾಕಲು ಡಿಸೆಂಬರ್ ನಿಂದ ಈ ಹಾರಾಟ ನಿಷೇಧಿಸಲಾಗಿದೆ ಎಂದು ಮೂಲಗಳನ್ನುಲ್ಲೇಖಿಸಿ ಅಮೆರಿಕದ ಮಾಧ್ಯಮ ವರದಿ ಮಾಡಿದೆ.    ಸಂತಾ ಕ್ಲಾರಾ, ಸ್ಯಾಂಟಿಯಾಗೋ, ಹೊಲ್ಗುನ್ ಸೇರಿದಂತೆ ಕ್ಯೂಬಾದ ಒಂಭತ್ತು ತಾಣಗಳಿಗೆ ವಿಮಾನ ಹಾರಾಟ ರದ್ದಾಗಲಿದೆ.     ಅಮೆರಿಕದ ಈ ನಡೆಯನ್ನು ಕ್ಯೂಬಾದ ವಿದೇಶಾಂಗ ಸಚಿವ ಬ್ರೂನೋ ರೋಡ್ರಿಗಸ್ ಖಂಡಿಸಿದ್ದಾರೆ. ಟ್ವಿಟರ್ ನಲ್ಲಿ ಅವರು ಇದು ಅಮೆರಿಕದ ಪ್ರಜೆಗಳ ಪ್ರವಾಸ ಮೇಲೆ ನಿರ್ಬಂಧ ಹೇರಿದಂತೆ, ಅಲ್ಲಿನ ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ. ಇದು ಜನರ ನಡುವಿನ ಸಂಬಂಧಗಳ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.