ಮುಧೋಳ ದಿ. 01: ಈಗಿನ ಸಮೂಹ ಮಾಧ್ಯಮಗಳು ತಮಗಿರುವ ಈ ಅಗಾಧ ಶಕ್ತಿಯನ್ನೇ ಮರೆತು ಅನಾರೋಗ್ಯಕರ ವಿಷಯಗಳನ್ನು ರೋಚಕಗೊಳಿಸುತ್ತ ಇಡೀ ಸಮಾಜವನ್ನು ಕದಡುತ್ತಿವೆ'' “ಪತ್ರಕರ್ತರಿಗೆ ಬರವಣಿಗೆ ಉಪ-ಜೀವನ ವಾಗಬಾರದು, ಬದಲಿಗೆ ಸಮಾಜವನ್ನು ಉತ್ತಮಪಡಿಸಲು ಇರುವ ಪ್ರಬಲವಾದ ಅಸ್ತ್ರ ಎಂಬ ಗ್ರಹಿಕೆ ಇರಬೇಕು, ಇಲ್ಲದಿದ್ದರೆ ಮಾಧ್ಯಮಗಳಿಂದಾಗಿಯೇ ಸಮಾಜದ ಬಗ್ಗೆ ತಪ್ಪು ಕಲ್ಪನೆ ಮೂಡುವ ಅಪಾಯವಿದೆ '' ಎಂದು ಪತ್ರಕರ್ತ ಮಹಾಂತೇಶ ಹಿರೇಮಠ ಹೇಳಿದರು.
ಬಾಗಲಕೋಟ ಬಿವ್ಹಿವ್ಹಿ ಸಂಘದ ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಆಶ್ರಯದಲ್ಲಿ ತಾಲೂಕಿನ ಇಂಗಳಗಿ ದತ್ತು ಗ್ರಾಮದಲ್ಲಿ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ 7 ದಿನಗಳ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ ಪಾಲ್ಗೊಂಡು ಪ್ರಸ್ತುತ ದಿನಮಾನದಲ್ಲಿ ಸಮೂಹ ಮಾಧ್ಯಮದ ಪಾತ್ರ ಕುರಿತು ಮಾತನಾಡಿ ಇಂದು ಸಮಾಜದಲ್ಲಿ ಬಡತನ, ಹಸಿವು, ಕಾರ್ಮಿಕರ ಶೋಷಣೆ ಹಾಗೂ ಅಸ್ಪೃಶ್ಯತೆಯಂಥ ಅಮಾನವೀಯ ಸಮಸ್ಯೆಗಳು ತಾಂಡವ ವಾಡುತ್ತಿವೆ ಹಾಗೆಯೇ ಭ್ರಷ್ಟಾಚಾರ, ಅತ್ಯಾಚಾರಗಳು ಕೂಡ ತಾಂಡವವಾಡುತ್ತಿವೆ ಆದರೆ ವಿದ್ಯುನ್ಮಾನ ಮಾಧ್ಯಮಗಳು ಇವೆಲ್ಲವನ್ನೂ ಕಣ್ಣೆತ್ತಿಯೂ ನೋಡುತ್ತಿಲ್ಲ, ಬದಲಿಗೆ ಟಿ.ಆರ್.ಪಿ ಗಾಗಿ ಅಮಾಯಕರನ್ನು ಬಲಿಪಶು ಮಾಡುತ್ತಿವೆ '' ಇದರಿಂದ ಸಮಾಜದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತವೆ, ಇದು ನಿಲ್ಲಬೇಕಾಗಿದೆ ಎಂದು ಹೇಳಿದರು.
ಇನ್ನೊರ್ವ ಪತ್ರಕರ್ತ ವಿಶ್ವನಾಥ ಮುನವಳ್ಳಿ ಅವರು ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿ ಸಮಾಜದ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದ್ದು, ಸಾಮಾಜಿಕ ಸ್ವಾಸ್ಥ-್ಯ ಕಾಪಾಡುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ, ರಾಜಕೀಯ ಮನಸ್ತಾಪಗಳು, ಸಣ್ಣ ಪುಟ್ಟ ಘಟನೆಗಳು ನಡೆಯುತ್ತವೆ, ಮಾಧ್ಯಮಗಳು ಸಣ್ಣ-ಪುಟ್ಟ ಘಟನೆಗಳನ್ನೇ ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡಬಾರದು ಇದರಿಂದ ಸಾಮಾಜಿಕ ಸ್ವಾಸ್ಥ-್ಯ ಕೆಡುತ್ತದೆ, ಸುದ್ದಿ ಮಾಧ್ಯಮಗಳು ಇಡೀ ಸಮಾಜವನ್ನು ಸುಧಾರಿಸುವ ಮತ್ತು ಆರೋಗ್ಯಕರವಾಗಿ ನಿರ್ಮಿಸುವಂತಹ ಕಳಕಳಿಯ ಸುದ್ದಿಗಳನ್ನು ಬಿತ್ತರಿಸಬೇಕೇ ವಿನಾ ಗಂಡ-ಹೆಂಡಿರ ಜಗಳಗಳಂಥ ಕ್ಷುಲ್ಲಕ ಮತ್ತು ವೈಯಕ್ತಿಕ ಸಂಗತಿಗಳನ್ನು ಪ್ರಸಾರ ಮಾಡುತ್ತ ಕಾಲ ಕಳೆಯಬಾರದು ಇದರಿಂದ ಸಮಾಜ ಸುಧಾರಣೆ ಆಗಲು ಸಾಧ್ಯವಿಲ್ಲವೆಂದು ಹೇಳಿ ಸಮಾಜ ಸುಧಾರಣೆಯಾಗುವಂತಹ ಸುದ್ದಿಗಳನ್ನು ಬಿತ್ತರಿಸಬೇಕೆಂದು ಮನವಿ ಮಾಡಿದರು.
ಎಸ್.ಆರ್.ಕಂಠಿ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಎಮ್.ಎಮ್.ಬಾಳನಾಯಕ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಲೋಕೇಶ ರಾಠೋಡ, ಪ್ರೊ.ಪಿ.ಡಿ.ಕುಂಬಾರ ಹಾಗೂ ಗ್ರಾಮದ ಪ್ರಮುಖರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು, ಗ್ರಾಮಸ್ಥರು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.