50 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಕರ ಸಂಘ ಸರ್ಕಾರಕ್ಕೆ ಒತ್ತಾಯ
ಆಲಮಟ್ಟಿ 05: ಇದೇ ಮೇ ತಿಂಗಳದೊಳಗಾಗಿ 50 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಕೂಡಲೇ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಜಂಟಿಯಾಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೇಸಿಗೆ ಕಾಲದ ರಜೆ ಬಳಿಕ ರಾಜ್ಯಾದ್ಯಂತ ಇದೇ ಮೇ 29 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ.ಎಂದಿನಂತೆ ಶಾಲಾ ತರಗತಿಗಳು ಆರಂಭವಾಗಲಿವೆ. ಕಾರಣ ಶಾಲೆಗಳು ಪ್ರಾರಂಭಗೊಳ್ಳುವ ಮೊದಲೇ ರಾಜ್ಯಾದ್ಯಂತ ಅಗತ್ಯ ವಿರುವ 50 ಸಾವಿರಕ್ಕೂ ಅಧಿಕ ಅತಿಥಿ ಶಿಕ್ಷಕರ ನೇಮಕ ಸರ್ಕಾರ ಮಾಡಿಕೊಂಡು ತಕ್ಷಣವೇ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಶಾಲೆಗಳು ಆರಂಭಗೊಳ್ಳುವ ಮೊದಲೇ ಅತಿಥಿ ಶಿಕ್ಷಕರ ನೇಮಕ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು ಕಾರ್ಯೋನ್ಮುಖರಾಗಿ ರಾಜ್ಯದ ಮಕ್ಕಳಿಗೆ ಒಳಿತು ಮಾಡಬೇಕು ಎಂದು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಶಾಲೆಗಳು ಪ್ರಾರಂಭಿಸಿದ ಬಳಿಕ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರೆ ತರಗತಿ ನಡೆಸಲು ಸಮಸ್ಯಾತ್ಮಕ ಕಷ್ಟಕರ ವಿದ್ಯಮಾನಗಳು ತಲೆದೋರುತ್ತವೆ.ಇದು ಕಲಿಕಾ ಮಕ್ಕಳ ಮೇಲೆ ತೀವ್ರ ಸ್ವರೂಪದ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಶಾಲೆಗಳು ಆರಂಭಗೊಂಡ ಮೊದಲ ದಿನದಿಂದಲೇ ಅಗತ್ಯ ವಿರುವ ಅತಿಥಿ ಶಿಕ್ಷಕರು ಶಾಲೆಗಳಲ್ಲಿ ಹಾಜರಿರಬೇಕು.ರಾಜ್ಯಾದ್ಯಂತ ಅವಶ್ಯಕತೆ ಇರುವಂಥ ಶಾಲೆಗಳಲ್ಲಿ ಮೇ 29 ರಂದೇ ಅತಿಥಿ ಶಿಕ್ಷಕರ ದರ್ಶನ ಮಕ್ಕಳು ಕಣ್ತುಂಬಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೆ.ನಾಗೇಶ ಹಾಗೂ ಚಂದ್ರಶೇಖರ ನುಗ್ಗಲಿ ಮಕ್ಕಳ ಹಿತದೃಷ್ಟಿಯಿಂದ ಕಳಕಳಿ ನಿವೇದನೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.