ವಿದ್ಯಾರ್ಥಿಗಳಿಗೆ ಓದುವುದೇ ದುಡಿಮೆ: ಪ್ರೊ.ಶಾಂತಾದೇವಿ ಟಿ.

Studying is work for students: Prof. Shantadevi T.

ವಿಜಯಪುರ 14: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗಗಳು ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಪ್ರಭಾರ ಕುಲಪತಿ ಪ್ರೊ.ಶಾಂತಾದೇವಿ ಟಿ ಹೇಳಿದರು. 

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ 2024-25 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದತ್ತಿ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಧಕರಿಗೆ ನಾವು ನೀಡುವ ಪ್ರೋತ್ಸಾಹವೇ ಉನ್ನತ ಸಾಧನೆ ಮಾಡಲು ಪ್ರೆರೇಪಣೆ ಹಾಗೂ ಸ್ಪೂರ್ತಿಯಾಗುತ್ತದೆ. ಒಂದು ಪುಸ್ತಕ, ಪೆನ್ನು, ಒಂದು ಮಗು, ಒಬ್ಬ ಶಿಕ್ಷಕ ಇಡೀ ಜಗತ್ತನೆ ಬದಲಾಯಿಸಬಹುದಾದ ಶಕ್ತಿ ಹೊಂದಿದ್ದಾರೆ. ಜೀವನದ ಯಶಸ್ಸಿಗೆ ವಿದ್ಯೆ ಪಡೆಯುವುದು ಎಷ್ಟು ಅವಶ್ಯವೋ ನಿತ್ಯ ಜೀವನದ ಸರ್ವ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು ಕೂಡಾ ಅಷ್ಟೇ ಪ್ರಮುಖವಾಗಿದ್ದು, ಶಿಕ್ಷಣದೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದರು. 

ದುಡಿಮೆ ಬದುಕು ಬದಲಾಯಿಸುತ್ತದೆ. ವಿದ್ಯಾರ್ಥಿಗಳಿಗೆ ಓದುವುದೇ ದುಡಿಮೆ ಎಂದು ಭಾವಿಸಬೇಕು. ಶ್ರಮ ಹಾಕಿ ತಾಳ್ಮೆ, ಸಹನೆ ಹಾಗೂ ನಿರಂತರವಾದ ಕಾಯಕದಿಂದ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಬದುಕು ಹಸನಾಗಿಸಿಕೊಳ್ಳಬೇಕು. ಶಿವಶರಣೆ ಅಕ್ಕ ಮಹಾದೇವಿ ಅವರು ಹೇಳಿರುವಂತೆ ಬೆಟ್ಟದ ಮೇಲೆ ಮನೆಯ ಮಾಡಿ ಮೃಗಗಳಿಗೆ ಅಂಜಿದರೆಂತು ಎಂಬಂತೆ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಬೇಕು. ಸವಾಲುಗಳಿಗೆ ಹೆದರದೆ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. 

ವಿದ್ಯಾರ್ಥಿಗಳು ಎಲ್ಲರೊಂದಿಗೆ ಬೆರೆತು, ಅವರಲ್ಲಿರುವ ಶಿಕ್ಷಣವನ್ನು ಪಡೆದುಕೊಂಡು ಉನ್ನತ ಸಾಧನೆ ಮಾಡಬಹುದು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವೇ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಅತ್ಯಂತಕ ಕಳವಳಕಾರಿ ಸಂಗತಿಯಾಗಿದ್ದು ಯುವ ಸಮುದಾಯ ಜೀವನದಲ್ಲಿ ದುಶ್ಚಟಗಳು ಸುಳಿಯದಂತೆ ಜಾಗರುಕತೆ ವಹಿಸಿಬೇಕು ಎಂದರು. 

ಜ್ಞಾನ ಎನ್ನುವುದು ಸಮುದ್ರ ಇದ್ದಂತೆ, ಪದವಿ ಪಡೆದರೆ ಸಮುದ್ರದ ಒಂದು ಹನಿ ನೀರು ಕುಡಿದಂತೆ, ನಿರಂತರ ಜ್ಞಾನ ನಮ್ಮನ್ನು ಅತೀ ಹೆಚ್ಚು ಪಕ್ವಗೊಳಿಸುತ್ತದೆ. ಸಮಾಜಿಕ ಜಾಲತಾಣಗಳು ಅತ್ಯುಪಯುಕ್ತವಾಗಿವೆ ಆದರೆ ವಿದ್ಯಾರ್ಥಿಗಳು ಯಾವುದನ್ನು ಬಳಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕಲಿಯುವುದನ್ನು ನಾವು ಯಾವುತ್ತಿಗೂ ನಿಲ್ಲಿಸಬಾರದು. ಪ್ರತಿದಿನ-ಪ್ರತಿಕ್ಷಣ ಕಲಿಯುವುದಕ್ಕೆ ಪಕೃತಿ ನಮಗೆ ಅನೇಕ ಅವಕಾಶ ನೀಡುತ್ತದೆ. ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಹಾಗಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ತಮ್ಮ ಬದುಕು ಸುಂದರವಾಗಿಸಿಕೊಳ್ಳಬಹುದು ಎಂದರು 

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರಾಬಿಯಾ ಮಿರ್ಧೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಳಿ ಎಷ್ಟು ಜ್ಞಾನ ಇದೆ ಎನ್ನುವುದು ಅತೀ ಮುಖ್ಯ. ನಾವು ಸಾಧನೆ ಮಾಡಲು ಕಠಿಣ ಪರೀಶ್ರಮ ಹಾಕಬೇಕು. ಅದಕ್ಕೆ ಶಿಸ್ತು, ಸಂಯಮ ಬಹಳ ಮುಖ್ಯವಾಗುತ್ತದೆ. ಎಲ್ಲಕ್ಕಿಂತಲೂ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಸಾಧಿಸುವ ಛಲ ಇದ್ದಲ್ಲಿ ಯಶಸ್ಸು ನಮ್ಮ ಸಮೀಪದಲ್ಲಿಯೇ ಇರುತ್ತದೆ. ಜೀವನದಲ್ಲಿ ಏರಿಳಿತಗಳು ಸಹಜ ನಾವು ಯಾವುದೇ ಕಠಿಣ ಸಂದರ್ಭ ಎದುರಾದರೂ ನಮ್ಮಲ್ಲಿನ ಆತ್ಮವಿಶ್ವಾಸ ಕುಸಿಯದಂತೆ ನೋಡೊಕೊಳ್ಳಬೇಕು ಎಂದರು. 

ವಿದ್ಯಾರ್ಥಿಗಳಿಗೆ ಸಾವಿರ ಸಮಸ್ಯೆಗಳಿವೆ ಆದರೂ ಅವುಗಳನ್ನು ಮೆಟ್ಟಿ ನಿಂತು ಸಾಧಿಸಿ ತೊರಿಸಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ. ನಮ್ಮ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲಿದೆ. ಸೌಲಭ್ಯಗಳನ್ನು ಬಳಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು ಎಂದರು. 

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕರನ್ನು ಸನ್ಮಾನಿಸಿ ಬಹುಮಾನ ವಿತರಣೆ ಮಾಡಲಾಯಿತು. 

ಈ ವೇಳೆಯಲ್ಲಿ ಡಾ.ಶ್ರೀನಿವಾಸ ದೊಡ್ಡಮನಿ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಡಾ.ಸ್ವಾತಿ ಪಾಟೀಲ ಶೈಕ್ಷಣಿಕ ಪ್ರಶಸ್ತಿಗಳನ್ನು ವರದಿಯನ್ನು ವಾಚನ ಮಾಡಿದರು. 

ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಡಾ.ಅನಿಲ ಭೀ.ನಾಯಕ್, ಐಕ್ಯೂಎಸಿ ಕೋ-ಆರ್ಡಿನಿನೇಟರ್ ಡಾ.ಪಿ.ಎಸ್‌.ಪಾಟೀಲ, ದೈಹಿಕ ನಿರ್ದೇಶಕ ಎಸ್‌.ಕೆ.ಪಾಟೀಲ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ.ಶ್ರೀನಿವಾಸ ದೊಡಮನಿ, ನ್ಯಾಕ್ ಸಂಯೋಜಕ ಡಾ.ಮಹೇಶ್ ಕುಮಾರ ಕೆ, ಪ್ರೊ.ಪವನ್ ಮಹೀಂದ್ರಕರ್, ಪ್ರೋ.ಎಸ್‌.ಡಿ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೈಯ್ಯದ ಅರ್ಬಾಜ್, ಪಾಯಲ್ ಚವ್ಹಾಣ, ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕರು, ಬೋಧಕೇತರ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.ಪ್ರೊ.ಶ್ವೇತಾ ಸವನೂರ ಕಾರ್ಯಕ್ರಮ ನಿರೂಪಿಸಿದರು.