ಗ್ರಾಮ ಪಂಚಾಯಿತಿ ಮೂಲಕ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಬಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

More strength for the administrative system through Gram Panchayat: Minister Lakshmi Hebbalkar

ಖಾನಾಪುರ 14:   ಸ್ಥಳೀಯ ಅಗತ್ಯಗಳನ್ನು ಪೂರೈಸುವಲ್ಲಿ, ಪಾರದರ್ಶಕತೆಯನ್ನು ತರುವಲ್ಲಿ ಮತ್ತು ಸರ್ವರ ಜವಾಬ್ದಾರಿಯನ್ನು ಖಾತರಿಪಡಿಸುವಲ್ಲಿ ಗ್ರಾಮ ಪಂಚಾಯತ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಖಾನಾಪುರ ತಾಲೂಕಿನ ಪಾರವಾಡ ಗ್ರಾಮದಲ್ಲಿ ಬುಧವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾಗಿರುವ ನೂತನ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕೇಂದ್ರೀಕರಣ ವ್ಯವಸ್ಥೆಯ ಅತ್ಯಂತ ಪ್ರಮುಖ ಮತ್ತು ಮೊದಲ ಹಂತದ ಸಂಸ್ಥೆಯಾಗಿರುವ ಗ್ರಾಮ ಪಂಚಾಯತಿಯ ನೂತನ ಕಟ್ಟಡವನ್ನು ಉದ್ಘಾಟಿಸುವ ಮೂಲಕ ವ್ಯವಸ್ಥೆಗೆ ಇನ್ನಷ್ಟು ಬಲ ತುಂಬುವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮದ ಪ್ರಗತಿ ಮತ್ತು ಅಭಿವೃದ್ಧಿಯ ಪ್ರತೀಕ ಗ್ರಾಮ ಪಂಚಾಯಿತಿ ಕಟ್ಟಡ. ಈ ಕಟ್ಟಡವು ಸ್ಥಳೀಯ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸಾರ್ವಜನಿಕ ಸೇವೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವರು ಹೇಳಿದರು. ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳ ಹೊಣೆಗಾರಿಕೆ ಅತ್ಯಂತ ಪ್ರಮುಖವಾದದ್ದು. ಈ ಕಟ್ಟಡವು  ಗ್ರಾಮದ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ ಹಾಗೂ ಪರಿಣಾಮಕಾರಿ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಆಶಿಸುತ್ತೇನೆ. ಗ್ರಾಮ ಪಂಚಾಯತ್ ಸ್ಥಾಪನೆಯ ಉದ್ದೇಶ ಈಡೇರಿಸುವಲ್ಲಿ  ಮತ್ತು ಸಮುದಾಯದ  ಹಿತ ಕಾಪಾಡುವಲ್ಲಿ ಈ ಕಟ್ಟಡ ಸಕಾರಾತ್ಮಕ ಕಾರ್ಯ ನಿರ್ವಹಿಸಲಿ ಎಂದು ಆಶಿಸುತ್ತೇನೆ ಎಂದರು. 

ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಸರಕಾರ ವಿಕೇಂದ್ರೀಕರಣ ವ್ಯವಸ್ಥೆಯ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದೆ. ಗ್ರಾಮ ಸಭೆಗಳ ಮೂಲಕವೇ ಫಲಾನುಭವಿಗಳ ಆಯ್ಕೆ ಆಗಬೇಕೆಂದು ನಾವು ಬಯಸುತ್ತೇವೆ. ಸ್ಥಳೀಯ ಸಂಸ್ಥೆಗಳಿಗೆ ಬಲ ತುಂಬುವ ಉದ್ದೇಶದಿಂದ ಆದಷ್ಟು ಶೀಘ್ರವಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ ಚುನಾವಣೆ ನಡೆಸಲು ತೀರ್ಮಾನಿಸಿದ್ದೇವೆ ಎಂದೂ ಸಚಿವರು ಹೇಳಿದರು.   

ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿದರು.  ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ, ಭೀಕಾಜಿ ಗಾವಡೆ, ಅರವಿಂದ ಪಾಟೀಲ ಪಾರವಾಡ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.