ವಿಜಯಪುರ 03: ಪುತ್ಥಳಿ ಮತ್ತು ವೃತ್ತ ನಿರ್ಮಾಣ ಹಾಗೂ ಪ್ರಮುಖ ಸ್ಥಳಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವುದರಿಂದ ರಾಷ್ಟ್ರ ನಾಯಕರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸಲು ಸಾಧ್ಯ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಇಂದು ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಹಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ದೇಶ ಮತ್ತು ಸಮಾಜಕ್ಕಾಗಿ ಹೋರಾಟ ನಡೆಸಿದ ರಾಷ್ಟ್ರ ನಾಯಕರ ಕಾರ್ಯಗಳನ್ನು ಸ್ಮರಿಸಲು ಪುತ್ಹಳಿ ಅನಾವರಣ ಮತ್ತು ರಾಷ್ಟ್ರ ನಾಯಕರ ಹೆಸರುಗಳನ್ನು ನಾನಾ ಸ್ಥಳಗಳಿಗೆ ನಾಮಕರಣ ಮಾಡುತ್ತಿರುವುದು ಉತ್ತಮ ಸಂಪ್ರದಾಯವಾಗಿದೆ. ಹಿಟ್ಟಿನಹಳ್ಳಿ ಗ್ರಾಮದಲ್ಲಿ ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಹಳಿ ಅನಾವರಣ ಮಾಡಲಾಗಿದೆ. ಸಚಿವ ಎಂ. ಬಿ. ಪಾಟೀಲ ಅವರ ಪ್ರಯತ್ನದಿಂದಾಗಿ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಸರಕಾರ ಆದೇಶ ಹೊರಡಿಸಿದೆ. ಈ ರೀತಿ ರಾಷ್ಟ್ರ ನಾಯಕರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲರ ಜವಾಬ್ದಾರಿಯಾಗಿದೆ. ರಾಷ್ಟ್ರ ನಾಯಕರ ಸ್ಮರಣೆ ಮತ್ತು ದೇಶ ಹಾಗೂ ಸಮಾಜಕ್ಕಾಗಿ ಅವರು ನೀಡಿರುವ ಕೊಡುಗೆಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಸಚಿವ ಎಂ. ಬಿ. ಪಾಟೀಲ ಅವರು ಮುಂಚೆಯಿಂದಲು ಛತ್ರಪತಿ ಶಿವಾಜಿ ಮಹಾರಾಜರು, ವೀರ ರಾಣಿ ಕಿತ್ತೂರ ಚನ್ನಮ್ಮ, ಡಾ. ಬಿ. ಆರ್. ಅಂಬೇಡ್ಕರ, ಕನಕದಾಸರು, ಭಗೀರಥ, ಸಂತ ಸೇವಾಲಾಲ ಸೇರಿದಂತೆ ಅನೇಕ ಮಹನೀಯರ ಪತ್ಹಳಿಗಳಿಗಾಗಿ ನೆರವು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ-ಹಿಟ್ಟಿನಹಳ್ಳಿ ಚರಂತಿಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ತಿಂತಣಿ ಬ್ರಿಡ್ಜ್ ಕನಕಗುರು ಪೀಠ ಶಾಖಾ ಮಠದ ಶ್ರೀ ಸಿದ್ದ ರಮಾನಂದ ಸ್ವಾಮೀಜಿ, ಕಿರಣ ಜೋಶಿ(ರಾಮಭಟ್ಟ),
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮುಖಂಡರಾದ ರವಿ ಕಡಿಮನಿ, ಸದಾಶಿವ ಪವಾರ, ಸುಧಾಕರ ಘಾಟಗೆ, ಎಲ್.ಎಲ್. ಉಸ್ತಾದ, ಸೋಮನಾಥ ಕಳ್ಳಿಮನಿ, ಹಾಸಿಂಪೀರ ವಾಲಿಕಾರ, ಜ್ಯೋತಿರಾಮ ಪವಾರ, ವೈದ್ಯ ಡಾ. ಗೌತಮ ವಗ್ಗರ, ಅಂಕಣಕಾರ ಮಂಜುನಾಥ ಜುನಗೊಂಡ, ರತ್ನಾಬಾಯಿ ಶಿ ಮುದೂರ, ಜಗದೀಶ ಚೌಧರಿ, ಮಹೇಶ ಹೊಸಗೌಡರ, ಬಾಬುರಾವ ತರಸೆ, ಬಿ. ಜಿ. ಶಿವಾಳಕರ, ವಿಜಯಕುಮಾರ ಚವ್ಹಾಣ, ಸುಧಾಕರ ಘಾಟಗೆ, ಜ್ಯೋತಿಬಾ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.