ಬಸವಣ್ಣ ಓರ್ವ ಅಪ್ಪಟ ಮಹಿಳಾವಾದಿ: ಆರತಿ

Basavanna is a true feminist: Aarti

ವಿಜಯಪುರ 02: ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸ್ತ್ರೀಯರಿಗೂ ಪುರುಷರಷ್ಟೇ ಸರಿಸಮಾನ ಸ್ಥಾನ ಕಲ್ಪಿಸಿದ ಬಸವಣ್ಣ ಓರ್ವ ಅಪ್ಪಟ ಮಹಿಳಾವಾದಿಯೂ ಆಗಿದ್ದಾರೆ ಎಂದು ಜಿಲ್ಲೆಯ ಯುವ ಕಾಂಗ್ರೆಸ್ ನಾಯಕಿ ಕು.ಆರತಿ ಶಹಾಪೂರ ಅವರು ಬಣ್ಣಿಸಿದರು.

ಬಸವ ಜಯಂತಿ ಹಿನ್ನೆಲೆ ನಗರದ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬೃಹತ್ ಬಸವಣ್ಣನ ಮೂರ್ತಿ ಎದುರಿನ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಪೂರ್ವಕ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಅಂದಿನ ಬಸವಣ್ಣನ ಪರಿಕಲ್ಪನೆಯ ಅನುಭವ ಮಂಟಪವು ಇಂದಿನ ಸಂಸತ್ ರಚನೆಗೆ ಬುನಾದಿಯಾಗಿದೆ. ಸಂಸತ್ತಿನಲ್ಲಿ ಮಹಿಳೆಯರು ಕೂಡ ಸ್ಥಾನಮಾನ ಗಳಿಸಲು ಬಸವಣ್ಣನವರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು. ತಳ ಸಮುದಾಯದ ಮಹಿಳೆಯರ ಬಗ್ಗೆ ಅದರಲ್ಲೂ ಶೋಷಿತ ಹಾಗೂ ಅಸಹಾಯಕ ಮಹಿಳೆಯರ ಬಗ್ಗೆಯೂ ಬಸವಣ್ಣ ಬಹಳ ವಿಶೇಷ ಕಾಳಜಿ ಹೊಂದಿದ್ದರು. ಬಾಲ್ಯದಲ್ಲಿ ಗಂಡು ಹಾಗೂ ಹೆಣ್ಣಿನ ಭೇದಭಾವದ ಬಗ್ಗೆ ಮನಗಂಡಿದ್ದ ಬಸವಣ್ಣ ಅದರ ವಿರುದ್ಧ ಒಂದು ದೊಡ್ಡ ಸಮರವನ್ನೇ ಸಾರಿದರು ಎಂದರು.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯಡಿ ಸಾಗಿದ ಸಮಾನತೆಯ ಹರಿಕಾರ ಬಸವಣ್ಣ ಈ ಜಗತ್ತಿನ ಮೊಟ್ಟಮೊದಲ ಸಮಾಜವಾದಿ ಎಂದು ಅವರು ಬಣ್ಣಿಸಿದರು.ಸಮ ಸಮಾಜದ ಕನಸುಗಾರ, ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಎಂದೇ ಮನೆಮನೆ ಮಾತಾಗಿರುವ ಬಸವಣ್ಣನವರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಬಸವಣ್ಣನ ತತ್ವ ಹಾಗೂ ಆದರ್ಶಗಳನ್ನು ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದರು. ಬಸವಣ್ಣನಂಥವರನ್ನು  ನೆನೆಯುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಆದ್ಯ ಕರ್ತವ್ಯವಾಗಿದೆ.  ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಸವಣ್ಣ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ ಎಂದರು.  ಸಮಾಜದ ಪರಿವರ್ತನೆಯ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವ, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಕೆಲಸವನ್ನು ಬಸವಣ್ಣ ತಮ್ಮ ಜೀವಿತ ಕಾಲದಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು. ಜೀವಪರ ನಿಲುವು ಹೊಂದಿದ್ದ ಬಸವಣ್ಣನವರು ತಳಸಮುದಾಯಗಳ ಜನರ ಬಗ್ಗೆ ವಿಶೇಷ ಒಲವು ಹೊಂದಿ, ಕತ್ತಲಲ್ಲಿದ್ದವರಿಗೆ ಹೊಸ ಬೆಳಕಿನ ಹಾದಿ ತೋರಿಸಿದರು. ಮೇಲು ಕೀಳು ಎಂಬ ತಾರತಮ್ಯದ ಭೇದ ಭಾವ ತುಂಬಿ ತುಳುಕುತ್ತಿದ್ದ ಅಂದಿನ ಸಮಾಜದಲ್ಲಿ ಬ್ರಾಹ್ಮಣನಾಗಿ ಜನಿಸಿದರೂ ಕೂಡ ಬ್ರಾಹ್ಮಣ್ಯಕ್ಕೆ, ಮೌಢ್ಯಗಳಿಗೆ ಸೆಡ್ಡು ಹೊಡೆದ ನಿಂತ ಬಸವಣ್ಣನಂತಹವರು ಮತ್ತೆ ಮತ್ತೆ ಹುಟ್ಟುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸಿನ ಮಹಿಳಾ ಘಟಕದ ಪದಾಧಿಕಾರಿಗಳಾದ ವಿದ್ಯಾರಾಣಿ ತುಂಗಳ್, ಮಹಾದೇವಿ ಗೋಕಾಕ್ ಗಂಗೂಭಾಯಿ ಧೂಮಾಳೆ, ದೀಪಾ ಕುಂಬಾರ ಸೇರಿದಂತೆ ಇನ್ನೀತರರು ಇದ್ದರು.