ಮಹಾಲಿಂಗಪುರ 01: 12ನೇ ಶತಮಾನದಲ್ಲಿ ಕ್ರಾಂತಿಪುರುಷರಾಗಿ ಕಂಗೊಳಿಸಿ ಸಮಾಜದ ಅಂಕುಡೊಂಕನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳಗಿದ ಮಹಾಚೇತನ ಬಸವಣ್ಣ. ಸಮಾಜ ಸುಧಾರಕನಾಗಿ, ಕವಿಯಾಗಿ, ಭಾವ ಜೀವಿಯಾಗಿ, ವಿಶ್ವಮಾನ್ಯರಾದವರು. ಕಲ್ಯಾಣದಲ್ಲಿ ಜ್ಞಾನದೀವಿಗೆಯನ್ನು ಬೆಳಗಿಸಿ ವಚನ ಪುಷ್ಪಗಳೆಂಬ ಸುವಾಸನೆಯನ್ನು ಬೀರಿದರು. ಲಿಂಗ ಮೆಚ್ಚಿ ಅಹುದಹುದು ಎಂಬಂತೆ ಅಮೃತ ತುಂಬಿದ ನುಡಿಗಳನ್ನು ಬಿಟ್ಟು ಹೋಗಿದ್ದಾರೆ. ಕಾಯಕ ತತ್ವದ ಮಹತ್ವವನ್ನು ತಿಳಿಸಿ, ಸರ್ವ ಸಮಾನತೆಯ ತತ್ವವನ್ನು ತೋರಿಸಿಕೊಟ್ಟರು. ಎಲ್ಲ ಜಾತಿ, ವರ್ಗದ ಜನರನ್ನು ಆಕರ್ಷಿಸಿದರು.ಕಲ್ಯಾಣದ ಮಾತುಕತೆಯೇ ಅನುಭವ ಮಂಟಪವಾಯಿತು.ಮಾತು ವಚನವಾಯಿತು. ವರ್ಣಭೇದದ ಅನಿಷ್ಠವನ್ನು ದೂರ ಮಾಡಲು ಪ್ರಯತ್ನಿಸಿದರು. ಲಿಂಗವಿದ್ದ ಮನೆಯೇ ಕೈಲಾಸವೆಂದು ಹೇಳಿದರು.ಹುಟ್ಟಿನಿಂದ ಕುಲವನಳಿಯದೇ ಆಚರಣೆಯಿಂದ ನಿರ್ಧರಿಸಬೇಕು ಎಂದರು. ‘ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಶರಣ’ ಎಂದು ಹೇಳಿದರು.ಬಸವಣ್ಣನವರು ಸಾಧಕರು,ಸುಧಾರಕರು, ಬರೀ ಬೋಧಕರಲ್ಲ. ಸರ್ವ ಸಮ ಭಾವನೆ ಅವರಲ್ಲಿತ್ತು. ಬಸವಣ್ಣನವರು ನಿಷ್ಠುರವಾದಿಗಳು, ವಜ್ರಕ್ಕಿಂತಲೂ ಕಠಿಣರಾಗಿ ಹೂವಿಗಿಂತಲೂ ಮೃದುವಾಗಿದ್ದರು ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ಜಗಜ್ಯೋತಿ ಬಸವಣ್ಣನವರ 892ನೇಯ ಜಯಂತಿ ಆಚರಿಸಿ ಮಾತನಾಡಿದರು.
ನಂತರ ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಬಸವಣ್ಣನವರು ಒಳ್ಳೆಯ ಸಂಘಟನಾ ಶಕ್ತಿಯುಳ್ಳವರಾಗಿದ್ದರು.ದಾಸೋಹದ ಮಹತ್ವ, ಆತ್ಮಸಾಕ್ಷಿಯಂತೆ ಬದುಕುವುದು. ಶಿವಾನುಭಾವಮಂಟಪ ಸ್ಥಾಪಿಸಿ ಶಿವಶರಣರನ್ನು ಸೇರಿಸುವುದು ಬಸವಣ್ಣನವರ ಅಸಾಧಾರಣ ಕಾರ್ಯಗಳಾಗಿದ್ದವು.‘ಎನ್ನಹೊಗಳಿ ಹೊಗಳಿ ಹೊನ್ನ ಶೂಲದಲ್ಲಿಕ್ಕಿದರು ಎಂದು ಹೊಗಳಿಕೆಯ ಬಗ್ಗೆ ನುಡಿದಿದ್ದಾರೆ ಎಂದರು.
ರಾಜು ಭಾವಿಕಟ್ಟಿ, ಸಮಾಜದ ಮುಖಂಡರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ, ಚಂದ್ರು ಗೊಂದಿ, ಶಿವಾನಂದ ಅಂಗಡಿ, ಮುತ್ತಪ್ಪ ದಲಾಲ, ಪುರಸಭೆ ಅಧಿಕಾರಿಗಳಾದ ಎಸ್ ಎನ್ ಪಾಟೀಲ, ಎಂ ಎಂ ಮುಗಳಕೊಡ, ಸಿ ಎಸ್ ಮಠಪತಿ, ಎಂ ಕೆ ದಳವಾಯಿ, ಪ್ರಕಾರ ಕಟಾವಿ, ಮಹಾಲಿಂಗ ಮಾಂಗ, ರಾಮು ಮಾಂಗ, ಮಹಾಲಿಂಗ ಗಸ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.