ವಿಜಯಪುರ 02: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಮುದ್ದೇಬಿಹಾಳದ ವಿದ್ಯಾರ್ಥಿ ಅಖಿಲಅಹ್ಮದ್ ನದಾಫ್ ಅವರಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ಶಿಕ್ಷಕ ದಂಪತಿ ನಾಸೀರಅಲಿ ಪಿಂಜಾರ ಮತ್ತು ಶೈನಾಜಬೇಗಂ ಓಲೆಕಾರ ಪುತ್ರ ಮತ್ತು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲಿನ ವಿದ್ಯಾರ್ಥಿ ಅಖಿಲ ಅಹ್ಮದ್ ನದಾಫ್ ಸಾಧನೆ ಹೆಮ್ಮೆ ತಂದಿದೆ. ಬಾಲ್ಯದಿಂದಲೇ ಪ್ರತಿಭಾವಂತನಾಗಿರುವ ಈ ವಿದ್ಯಾರ್ಥಿ ಈಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಮಾಡಿರುವ ಸಾಧನೆ ಇತರ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಬಸವನಾಡು ವಿಜಯಪುರ ಜಿಲ್ಲೆಗೆ ಸಾಧನೆಯ ಮೂಲಕ ಕೀರ್ತಿ ತಂದಿರುವ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಿರಲಿ ಎಂದು ಅವರು ಶುಭ ಕೋರಿದ್ದಾರೆ.
ಅಖಿಲ್ ಅಹ್ಮದ್ ನದಾಫ್ ಸಾಧನೆಗೆ ಕಾರಣರಾದ ವಿದ್ಯಾರ್ಥಿಯ ಪೋಷಕರು, ಶಾಲೆಯ ಆಡಳಿತ ಮಂಡಳಿ ಹಾಗೂ ಪಾಠ ಬೋಧಿಸಿದ ಶಿಕ್ಷಕರಿಗೂ ಸಚಿವ ಎಂ. ಬಿ. ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.