ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಜೆಡಿಎಸ್ನ ಎಲ್ಲಾ ಶಾಸಕರ ಒಂದು ತಿಂಗಳ ವೇತನ; ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು ಆ 9     ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪರಿಹಾರ ಕಾರ್ಯಕ್ಕಾಗಿ ಜೆಡಿಎಸ್  ಪಕ್ಷದ ಎಲ್ಲಾ ಶಾಸಕರು ತಮ್ಮ ಒಂದು ತಿಂಗಳ ವೇತನ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಾವು ನಿಲ್ಲಬೇಕು, ಜ್ವರದಿಂದ ಬಳಲುತ್ತಿರುವ ಕಾರಣ ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ತೆರಳಿ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಕುಮಾರಸ್ವಾಮಿ ಅವರು ಬೆಳಗಾವಿ, ರಾಯಚೂರು, ಹಾಸನ, ಕೊಡಗು ಹಾಗೂ ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳು ಶ್ರಮ ಪಡುತ್ತಿರುವ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳನ್ನು ಅಭಿನಂದಿಸಿದರು. 

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಕೂಡ ತಮ್ಮ ಒಂದು ತಿಂಗಳ ವೇತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ. 

ರಾಜ್ಯದಲ್ಲಿ ಕಂಡು ಕೇಳರಿಯದಂತ ಭೀಕರ ಪ್ರವಾಹ ಆವರಿಸಿದೆ. ಪ್ರವಾಹದಿಂದ ನನ್ನ ಜಿಲ್ಲೆಯೂ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ, ಐದು ಸಾವಿರಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡಿವೆ. ನೆರೆ ಸಂತ್ರಸ್ತರ ನೆರವಿಗೆ ಧಾವಿಸುವುದು ಪ್ರತಿಯೊಬ್ಬರ ಕರ್ತವ್ಯ. ನಿನ್ನೆ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲೂಕುಗಳ ಸುಮಾರು 23 ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಸಂತ್ರಸ್ತರ ಅಳಲನ್ನು ಆಲಿಸಿದ್ದೇನೆ. ಇಂತಹ ಸ್ಥಿತಿಯಲ್ಲಿ ನಾನು ಲೋಕಸಭಾ ಸದಸ್ಯನಾಗಿ ನನ್ನ ಒಂದು ತಿಂಗಳ ಸಂಬಳವನ್ನು ಸಂತ್ರಸ್ತರ ಪರಿಹಾರ ನಿಧಿಗೆ ಅಪರ್ಿಸುತ್ತಿದ್ದೇನೆ. ಪ್ರಜ್ವಲ್ ರೇವಣ್ಣ ಬ್ರಿಗೇಡ್ ಕೂಡ ಸಂತ್ರಸ್ತರ ನೆರವಿಗೆ ಬರಲಿದೆ. ಬ್ರಿಗೇಡ್ ವತಿಯಿಂದಲೂ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುವುದು ಎಂದು ಪ್ರಜ್ವಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.