ಕೃಷಿ ಇಲಾಖೆಯಿಂದ ಕಬ್ಬು ಕಟಾವು ಯಂತ್ರ, ಪರಿಹಾರ ವಿತರಣೆ
ಕಾಗವಾಡ 03: ಕಳೆದ 2 ವರ್ಷಗಳಿಂದ ಕಾಗವಾಡ ಕ್ಷೇತ್ರದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸಾಕಷ್ಟು ಅನುದಾನ ತಂದಿರುವ ತೃಪ್ತಿ ನನಗಿದೆ. ಈಗ ಕೃಷಿ ಇಲಾಖೆಯ ಸಬ್ಸಿಡಿಯೊಂದಿಗೆ 4 ರೈತರಿಗೆ ಕಬ್ಬು ಕಟಾವು ಯಂತ್ರ ಮತ್ತು ಅವಘಡಗಳಿಂದ ಮೃತರಾದ ಕುಟುಂಬದ ಸದಸ್ಯರಿಗೆ ಪರಿಹಾರಧನ ವಿತರಿಸಲಾಗಿದೆಯೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಅವರು, ಶನಿವಾರ ದಿ. 03 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಕೃಷಿ ಇಲಾಖೆಯ ವತಿಯಿಂದ ಕ್ಷೇತ್ರದ 4 ಜನ ರೈತರಿಗೆ ಸಬ್ಸಿಡಿಯಲ್ಲಿ ಕಬ್ಬು ಕಟಾವು ಯಂತ್ರಗಳನ್ನು ಹಸ್ತಾಂತರಿಸಿ, ಕ್ಷೇತ್ರದಲ್ಲಿ ವಿದ್ಯುತ್, ಸಿಡಿಲು, ಹಾವು ಕಡಿದು ಸೇರಿದಂತೆ ವಿವಿಧ ಅವಘಡಗಳಲ್ಲಿ ಮೃತರಾದ 4 ಜನರ ಕುಟುಂಬದ ಸದಸ್ಯರಿಗೆ ಪರಿಹಾರಧನ ವಿತರಿಸಿ, ಮಾತನಾಡುತ್ತಿದ್ದರು. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಸುದಾರಣೆ, ನೀರಾವರಿ ಯೋಜನೆಗಳು, ಕೆರೆ ತುಂಬವ ಯೋಜನೆ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಅನುಷ್ಠನಗೊಳಿಸಲಾಗಿದೆ. ನನ್ನ 2 ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಗರಿಷ್ಠ ಅನುದಾನ ತಂದಿರುವ ತೃಪ್ತಿ ಇದೆ. ಮುಂದಯೇ ಸಹ ಇದೇ ರೀತಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಧ್ಯವಿರುವ ಎಲ್ಲ ಇಲಾಖೆಗಳಿಂದ ಅನುದಾನ ತರಲು ಶ್ರಮಿಸುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ನಿಂಗರಾಜ ಬಿರಾದರ, ಕಾಂತಿನಾಥ ಬಿರಾದರ, ಮುಖಂಡರಾದ ಅರುಣ ಗಾಣಿಗೇರ, ರಮೇಶ ಚೌಗುಲೆ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು, ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.