ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂಡಿ ತಾಲೂಕಿಗೆ ರಕ್ಷಿತಾ ಕೊಡಹೊನ್ನ ಪ್ರಥಮ
ಇಂಡಿ 03: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಂದಿದ್ದು, ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ರಕ್ಷಿತಾ ಕೊಡಹೊನ್ನ 625 ಕ್ಕೆ 620 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಬಂಥನಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶ್ರೇಯಾ ಶಿರಶ್ಯಾಡ 618 ಅಂಕ ಪಡೆದು ದ್ವಿತೀಯ ಹಾಗೂ ಯುವರಾಜ ಹತ್ತಳ್ಳಿ 617 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ಶ್ರೀ ಸಾಯಿ ಪಬ್ಲಿಕ್ ಶಾಲೆಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಸುಶ್ಮಿತಾ ಮಾಶ್ಯಾಳ ಕೂಡ 617 ಅಂಕ ಪಡೆದು ತೃತೀಯ ಸ್ಥಾನ ಹಂಚಿಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
2424 ಹುಡುಗರು ಮತ್ತು 2310 ಹುಡುಗಿಯರು ಸೇರಿದಂತೆ ಒಟ್ಟು 4734 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1021 ಹುಡುಗರು ಮತ್ತು 1422 ಹುಡುಗಿಯರು ಸೇರಿದಂತೆ ಒಟ್ಟು 2443 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 52.68 ಪ್ರತಿಶತ ಸಾಧನೆ ಆಗಿದೆ.
ಕನ್ನಡ ಪ್ರಥಮ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದವರು-34, ಇಂಗ್ಲೀಷ್ ದ್ವಿತೀಯ ಭಾಷೆಯಲ್ಲಿ 100 ಕ್ಕೆ 100 ಅಂಕ ಪಡೆದವರು-06, ಕನ್ನಡ ದ್ವಿತೀಯ ಭಾಷೆಯಲ್ಲಿ 100 ಕ್ಕೆ 100 ಪಡೆದ ವಿದ್ಯಾರ್ಥಿಗಳು-27, ಹಿಂದಿ ತೃತೀಯ ಭಾಷೆಯಲ್ಲಿ 100 ಕ್ಕೆ 100 ಅಂಕ ಪಡೆದವರು-114, ಗಣಿತದಲ್ಲಿ 100 ಕ್ಕೆ 100 ಅಂಕ ಪಡೆದವರು-11, ವಿಜ್ಞಾನದಲ್ಲಿ 100 ಕ್ಕೆ 100 ಅಂಕ ಪಡೆದವರು-16, ಸಮಾಜ ವಿಜ್ಞಾನದಲ್ಲಿ 100 ಕ್ಕೆ 100 ಅಂಕ ಪಡೆದವರು-67 ವಿದ್ಯಾರ್ಥಿಗಳು ಎಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾಲೂಕ ನೋಡಲ್ ಅಧಿಕಾರಿ ಎ ಓ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.