ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಕೂಡಲೇ ವಾಪಸ್ ಪಡೆಯಿರಿ: ಕೊಪ್ಪಳದಲ್ಲಿ ಮುಸ್ಲಿಮರ ಬೃಹತ್ ಪ್ರತಿಭಟನೆ
ಕೊಪ್ಪಳ 03: ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದನ್ನು ಖಂಡಿಸಿ ಕೂಡಲೇ ಇದನ್ನು ವಾಪಸ್ ಪಡೆಯಲು ಆಗ್ರಹಿಸಿ ಕೊಪ್ಪಳದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು. ಶನಿವಾರ ಬೆಳಿಗ್ಗೆ ನಗರದ ಗಡಿಯಾರ ಕಂಬದ ಬಳಿಯಿಂದ ಪ್ರಮುಖ ಜವಾಹರ್ ರಸ್ತೆ ಮೂಲಕ ಸಂಚರಿಸಿದ ಬೃಹತ್ ಮೆರವಣಿಗೆ ಅಶೋಕ್ ಸರ್ಕಲ್ ಬಳಿ ಜಮಾಯಿಸಿ ಭಾರಿ ಪ್ರತಿಭಟನೆ ರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ಮುಸ್ಲಿಮರ ವಕ್ಫ್ ತಿದ್ದುಪಡಿ ಕಾಯ್ದೆ ಕೈಬಿಡಬೇಕೆಂದು ಒತ್ತಾಯಿಸಿದರು.ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಸರ್ಕಾರ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರನ್ನು ಅನಾವಶ್ಯಕ ತೊಂದರೆ ಕಿರುಕುಳ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೂಡಲೆ ಮುಸ್ಲಿಮರ ವಿರುದ್ಧದ ಮತ್ತು ಸಂವಿಧಾನ ದ ವಿರುದ್ಧದ ವಕ್ಫ್ ತಿದ್ದುಪಡಿ ಕಾಯ್ದೆ ಕೈ ಬಿಡಬೇಕು, ಮುಸ್ಲಿಮರಿಗೆ ನ್ಯಾಯಯುತವಾಗಿ ಬದುಕಲು ಮತ್ತು ಅವರ ನ್ಯಾಯ ಸಮ್ಮತ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸದರಿ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಿಲ್ಲಾ ಸಮಿತಿ ವಹಿಸಿಕೊಂಡಿದ್ದು ಮುಸ್ಲಿಂ ಧರ್ಮ ಗುರು ಹಾಗೂ ಯೂಸುಫಿಯಾ ಮಸೀದಿಯ ಖತೀಬ್ ವ ಇಮಾಮ್ ಮೌಲಾನ ಮೌಲ್ವಿ ಹಾಫಿಜ್ ವ ಖ್ವಾರಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ವ ತಸ್ಕಿನಿ ನೇತೃತ್ವ ವಹಿಸಿದ್ದರು ಮತ್ತು ಅವರು ಮಾತನಾಡಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ಸಂಸದ ಕೆ.ರಾಜಶೇಖರ್ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ ಗುಪ್ತ ಮತ್ತು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಹಿರಿಯ ನ್ಯಾಯವಾದಿ ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಎಸ್ ಆಸೀಫ ಅಲಿ, ಪ್ರಗತಿಪರ ಹೋರಾಟಗಾರರಾದ ಪ್ರೊಫೆಸರ್ ಅಲ್ಲಮ ಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ್, ಕಾಂಗ್ರೆಸ್ ಯುವ ನಾಯಕ ಕೆ.ಸೋಮಶೇಖರ ಹಿಟ್ನಾಳ, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಂದ್ರ ಚೋಪ್ರಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಗಡಾದ್, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಸಜ್ಜನ್, ನಗರಸಭೆ ಸದಸ್ಯರಾದ ರಾಜಶೇಖರ್ ಅಡೂರ್, ಅಜೀಮ್ ಅತ್ತಾರ್ ಅಕ್ಬರ್ ಪಾಷಾ ಪಲ್ಟನ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಾ ಕಾಟನ್ ಹಿರಿಯ ನ್ಯಾಯವಾದಿಗಳಾದ ಪಿಆರ್ ಹೊಸಳ್ಳಿ , ಎ.ಎ ಚೌತಾಯಿ, ಹಿರಿಯ ನಾಯಕ ಯಮನೂರ್ಪ ನಾಯಕ್, ಸಮಾಜದ ಮುಖಂಡರಾದ ಕೆ.ಎಂ ಸಯ್ಯದ್, ಬಾಶು ಸಾಬ್ ಖತೀಬ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ ಆಸೀಫ್ ಕರ್ಕಿಹಳ್ಳಿ ,ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾ ಅಧ್ಯಕ್ಷ ಎಂ ಡಿ ಜಿಲಾನ್ ಕಿಲ್ಲೇದಾರ್ ಮೈ ಲೈಕ, ದಲಿತ ಮುಖಂಡ ಪರಶುರಾಮ್ ಕೆರೆಹಳ್ಳಿ ಹುಸೇನ್ ಪೀರ ಮುಜಾವರ್ ಮೌಲಾನ ಮೊಹಮ್ಮದ್ ಅಲಿ ಹಿಮಾಯಿತಿ, ಅಬ್ದುಲ್ ಅಜೀಜ್ ಮಾನ್ವಿಕರ್, ಮಾನ್ವಿ ಪಾಷಾ, ಮೆಹಬೂಬ್ ಅರಗಂಜಿ ,ಗಫಾರ್ ದಡ್ಡಿ ,ಸಿರಾಜ್ ಮನಿಯರ್, ಯಜದಾನಿ ಪಾಶ ಖಾದ್ರಿ ಅಯ್ಯುಬ ಅಡ್ಡೆ ವಾಲೆ ಫಕ್ರುದ್ದೀನ್ ನದಾಫ್ ಸಮಾಜದ ಯುವ ನಾಯಕರಾದ ಸಲೀಂ ಮಂಡಲಗಿರಿ, ಸಲೀಂ ಅಳವಂಡಿ ಸಲೀಂ ಗೊಂಡಬಾಳ ,ನಾಸೀರ್ ಕಂಠಿ ,ಮೆಹಮುದ್ ಹುಸೇನಿ, ಅಲ್ಲದೆ ಯುವ ನಾಯಕರಾದ ಶರಣು ಗದ್ದಿ ಮತ್ತು ಮಂಜುನಾಥ್ ಗೊಂಡವಾಳ ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಮುಸ್ಲಿಂ ಸಮಾಜ ಬಾಂಧವರು ಅಲ್ಲದೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮುಖ್ಯಸ್ಥರು ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಜಿಲ್ಲಾ ಆಡಳಿತದ ಪರವಾಗಿ ಕೊಪ್ಪಳದ ತಹಶೀಲ್ದಾರ್ ವಿಠಲ್ ಚೌಗಲಾ ರವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳವರ ಗಮನಕ್ಕೆ ತಂದು ಅವರ ಮೂಲಕ ರಾಷ್ಟ್ರಪತಿಯವರಿಗೆ ರವಾನಿಸಲಾಗುವುದು ಎಂದು ಹೇಳಿದರು, ಸೂಕ್ತ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.