ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ: ಮೂಲಭೂತ ಸೌಕರ್ಯಗಳ ವ್ಯವಸ್ಥೆ ಒದಗಿಸಲಾಗುವುದು: ಸಂಸದ ಕೆ.ರಾಜಶೇಖರ ಹಿಟ್ನಾಳ

Huligemmadevi Jatra Festival: Basic facilities will be provided: MP K. Rajashekar Hitnal

ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ: ಮೂಲಭೂತ ಸೌಕರ್ಯಗಳ ವ್ಯವಸ್ಥೆ ಒದಗಿಸಲಾಗುವುದು: ಸಂಸದ ಕೆ.ರಾಜಶೇಖರ ಹಿಟ್ನಾಳ 

ಕೊಪ್ಪಳ 03: ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ ಬಸಬರಾಜ ಹಿಟ್ನಾಳ ಹೇಳಿದರು. 

ಅವರು ಶುಕ್ರವಾರ ತಮ್ಮ ಕಛೇರಿ ಸಭಾಂಗಣದಲ್ಲಿ 2025ರ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು  ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ 2025ನೇ ಸಾಲಿನ ಜಾತ್ರಾ ಮಹೋತ್ಸವವು ಮೇ 20 ರಿಂದ ಮೇ 24ರವರೆಗೆ ಪ್ರಮುಖ ದಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಜಾತ್ರಾ ಮಹೋತ್ಸವವು ಒಂದು ತಿಂಗಳ ಕಾಲ ಜರುಗಲಿದ್ದು, ಈ ಸಮಯದಲ್ಲಿ ಕರ್ನಾಟಕದಾದ್ಯಂತ ಹಾಗೂ ಆಂಧ್ರ, ಮಹಾರಾಷ್ಟ್ರ ಹಾಗೂ ಇನ್ನಿತರೆ ಪ್ರದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವಿಯವರ ದರ್ಶನವನ್ನು ಪಡೆಯಲು ಆಗಮಿಸುತ್ತಿದ್ದಾರೆ ಎಂದರು.ಸರ್ಕಾರವು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುತ್ತದೆ. 

 ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುವುದರಿಂದ ಈ ಬಾರಿ ಜಾತ್ರಾ ಮಹೋತ್ಸವವನ್ನು ಭಕ್ತಾದಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿನಿತ್ಯ ಪ್ರಸಾದದ ವ್ಯವಸ್ಥೆಯನ್ನು ಮಾಡಲು ಕ್ರಮ ವಹಿಸಲಾಗಿದ್ದು, ಮೇ 12 ರಿಂದ ಒಂದು ತಿಂಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ರಾತ್ರಿಯ ತನಕ ನಿರಂತರ ದಾಸೋಹ ಸೇವೆಯನ್ನು ಕಲ್ಪಿಸಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವವನ್ನು ಇಲಾಖೆಯ ಜೊತೆಗೆ ಸಾರ್ವಜನಿಕ, ಭಕ್ತಾದಿಗಳ ಸಹ ಬಾಗಿತ್ವದಲ್ಲಿ ಅವರ ತನು-ಮನ-ಧನ ಸೇವೆಯನ್ನು ಪಡೆದು ಸ್ವಯಂ ಭಾಗವಹಿಸುವ ಮೂಲಕ ಅದ್ದೂರಿಯಾಗಿ ನೆರವೇರಿಸಲು ಉದ್ದೇಶಿಸಲಾಗಿದೆ ಎಂದರು.ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಜನದಟ್ಟಣೆ ಸೇರುವ ಎಲ್ಲಾ ಕಡೆಗಳಲ್ಲಿ ಕಲ್ಪಿಸಲು ಸಂಕಲ್ಪ ಮಾಡಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೊಪ್ಪಳ, ಗಂಗಾವತಿ, ಹಿಟ್ನಾಳ್ ಕಡೆಯಿಂದ ಬರುವ ಮಾರ್ಗದಲ್ಲಿ 3 ಕಡೆ ಸ್ನಾನಗೃಹಗಳನ್ನು ಒಳಗೊಂಡ ಪ್ರತ್ಯೇಕ ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ಅದೇ ರೀತಿಯಾಗಿ ಹೊಸಪೇಟೆ ಮಾರ್ಗವಾಗಿ ಬರುವ ಭಕ್ತಾದಿಗಳಿಗೆ ವಿವಿಧ 3 ಕಡೆ ಸ್ನಾನಗೃಹ,ಗಳನ್ನು ಒಳಗೊಂಡ ಪ್ರತ್ಯೇಕ ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ಕಲ್ಪಿಸಲಾಗುತ್ತದೆ. ಈ ಬಾರಿ ಪ್ರಥಮ ಬಾರಿಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ದೇವಸ್ಥಾನದ ಸಮೀಪ ತಲುಪುವಂತೆ ದೇವಸ್ಥಾನದ ಎಡಭಾಗ ಮತ್ತು ಬಲಭಾಗದ ಖಾಸಗಿ ಹೊಲಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿ, ಸರ್ಕಾರಿ ಬಸ್ಸುಗಳಿಗೆ ಹಾಗೂ ಖಾಸಗಿ ಬಸ್ಸುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. 

ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ದೇವಸ್ಥಾನಕ್ಕೆ ಸೇರಿದ ವಿವಿಧ ಎಲ್ಲಾ ಕಡೆಗೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಪ್ರಸಾದಕ್ಕಾಗಿ ಜರ್ಮನ್ ಹ್ಯಾಂಗರ್ ಹಾಗೂ ಇತರೆ ಸೌಲಭ್ಯ ವಿವಿಧ ಕಡೆಗೆ ಸ್ವಾಗತ ಗೇಟುಗಳನ್ನು, ಪ್ಲೆಕ್ಸ್‌ ಗೇಟುಗಳು, ಸೈನ್ ಬೋರ್ಡುಗಳನ್ನು ಸಾರ್ವಜನಿಕ ಮಾಹಿತಿ ಕೇಂದ್ರ ಹಾಗೂ ದೇವಸ್ಥಾನದ ವಿವಿಧೆಡೆ ಲೈಟಿಂಗ್ ವ್ಯವಸ್ಥೆ, ಎಲ್‌.ಇ.ಡಿ. ವಾಲ್‌-ಗಳನ್ನು ಅಳವಡಿಸಿ ಭಕ್ತಾದಿಗಳಿಗೆ ಅನುಕೂಲವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ದೇವಾಲಯಕ್ಕೆ ಪ್ರತ್ಯೇಕ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಅಳವಡಿಸಿ, ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವಾಗಿ ನೋಡಲು ಅನುಕೂಲವನ್ನು ಕಲ್ಪಿಸಲಾಗಿದೆ ಎಂದರು.ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಇಲಾಖೆಯ ಜೊತೆಗೆ ಗ್ರಾಮಸ್ಥರ, ಪ್ರಮುಖರ ಸಮಿತಿಯನ್ನು ರಚಿಸಿ, ಎಲ್ಲಾ ಮೂಲಭೂತ ಸೌಕರ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಅವರಿಗೆ ನೀಡಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನಿಗಾ ವಹಿಸಲು ಕ್ರಮ ಜರುಗಿಸಲಾಗುತ್ತಿದೆ. ದೇವಸ್ಥಾನದ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳಲು ಸ್ವಯಂ ಸೇವಕರನ್ನು ನಿಯೋಜಿಸಿ, ಸಾಂಗೋಪಾಂಗವಾಗಿ ನೇರವೇರಲು ಕ್ರಮ ವಹಿಸಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತಲ ಪ್ರದೇಶ, ಪಾರ್ಕಿಂಗ್ ಪ್ರದೇಶ, ನದಿ ತೀರ, ಬಯಲು ಪ್ರದೇಶ, ಮುಖ್ಯರಸ್ತೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪ್ರತ್ಯೇಕ ಸಮಿತಿಯನ್ನು ರಚಿಸಿ, ಆ ಮೂಲಕ ಸಮಗ್ರ ಕ್ಷೇತ್ರದ ಸ್ವಚ್ಛತೆಗಾಗಿ ಸ್ವಚ್ಛತಾ ಸಿಬ್ಬಂದಿಗಳನ್ನು ಬಳಸಿಕೊಂಡು ಭಕ್ತಾದಿಗಳ ಆರೋಗ್ಯ ಸುರಕ್ಷತೆಗೆ ಕ್ರಮ ವಹಿಸಲಾಗುತ್ತಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಆರೋಗ್ಯ ಸುರಕ್ಷತೆಗಾಗಿ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಭಕ್ತಾದಿಗಳ ಸುರಕ್ಷತೆಗಾಗಿ ಅಗ್ನಿಶಾಮಕ ದಳ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಆರಕ್ಷಕ ತಂಡ ಮತ್ತು ಹೆಚ್ಚಿನ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ  ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್‌.ಪ್ರಕಾಶ್ರಾವ್, ಪಾಲಾಕ್ಷಪ್ಪ, ವೆಂಕಟೇಶ, ಈರಣ್ಣ ಈಳಿಗೇರ ಸೇರಿದಂತೆ ಹಾಗೂ ಇತರರು ಉಪಸ್ಥಿತರಿದ್ದರು.