ಮೇ 12ರಂದು ಭಗವಾನ್ ಬುದ್ಧರ ಜಯಂತಿ ಆಚರಣೆಗೆ ನಿರ್ಧಾರ: ರವಿ ವಸ್ತ್ರದ್
ಕೊಪ್ಪಳ 03: ಜಿಲ್ಲಾ ಕೇಂದ್ರದಲ್ಲಿ ಇದೇ ಮೇ 12 ರಂದು ಭಗವಾನ್ ಬುದ್ಧರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಶಾಖೆಯ ತಹಶಿಲ್ದಾರ ರವಿ ವಸ್ತ್ರದ್ ಹೇಳಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಗವಾನ್ ಬುದ್ಧರ ಜಯಂತಿ ಆಚರಿಸುವ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಗವಾನ್ ಬುದ್ಧರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮವನ್ನು ಮೇ 12ರಂದು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕೊಪ್ಪಳ ಜಿಲ್ಲಾ ಮಟ್ಟದ ಕಾರ್ಯಕ್ರಮವು ಅಂದು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಾಗಿದ್ದು, ವಿಶೇಷ ಉಪನ್ಯಾಸ ಹಾಗೂ ಇತರೆ ಕಾರ್ಯಕ್ರಮಗಳು ಮತ್ತು ಸಂಜೆ ಮೆರವಣಿಗೆ ನಡೆಯಲಿದೆ ಎಂದರು. ಜಯಂತಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆಯಿಂದ ಕಲ್ಪಿಸಬೇಕು. ವೇದಿಕೆ ಅಲಂಕಾರ, ಗಣ್ಯರಿಗೆ ಪುಸ್ತಕ ವಿತರಣೆ, ಪೂಜೆಗೆ ಹೂವು, ಹಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒದಗಿಸಬೇಕು. ಪೊಲೀಸ್ ಇಲಾಖೆಯಿಂದ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಭವನದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಬೇಕು. ಕಾರ್ಯಕ್ರಮಕ್ಕಾಗಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಜಯಂತಿ ದಿನದಂದು ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಸರಕಾರಿ ಕಛೇರಿಗಳಲ್ಲಿ ಭಗವಾನ್ ಬುದ್ಧರ ಜಯಂತಿಯನ್ನು ಆಚರಿಸಬೇಕು ಎಂದು ಹೇಳಿದರು. ಈ ಸಭೆಯಲ್ಲಿ ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಸಮಾಜದ ಮುಖಂಡರಾದ ಗವಿಸಿದ್ದಪ್ಪ ಎಂ. ಬೆಲ್ಲದ್, ಸಿದ್ದಪ್ಪ ಹೊಸಮನಿ, ಗವಿಸಿದ್ದಪ್ಪ ಡಿ. ಬೆಲ್ಲದ್, ರಾಘು ಚಕ್ರಿ, ಗವಿಸಿದ್ದಪ್ಪ ಹಳ್ಳಲ್ಲಿ, ಜಿ.ಎಂ.ಬೆಲ್ಲದ್, ಶಾಂತಪ್ಪ ಸೋಂಪುರ, ಯಲ್ಲಪ್ಪ ಬಳಗಾನೂರ, ಕಾಶಪ್ಪ ಚಲವಾದಿ, ಸತೀಶ್ ಬನ್ನಿಕೊಪ್ಪ ಹಾಗೂ ಮತ್ತಿತರರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶ ಪರಶುರಾಮ ವೈ. ಶೆಟ್ಟಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ, ತಹಶಿಲ್ದಾರ ಕಛೇರಿಯ ಶಿರಸ್ತೆದಾರ ಮಹಾವೀರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.