ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ‘ದುಡಿಯೋಣ ಬಾ’ ಅಭಿಯಾನ ಆರಂಭಿಸಿದೆ: ಮಲ್ಲಯ್ಯ ಕೊರವನವರ
ಗದಗ 04: ಗ್ರಾಮೀಣ ಜನರು ಬೇಸಿಗೆಯಲ್ಲಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ‘ದುಡಿಯೋಣ ಬಾ’ ಅಭಿಯಾನ ಆರಂಭಿಸಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಅವರು ಹೇಳಿದರು. ಈ ಕುರಿತು ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿರುವ ಗದಗ ತಾಲೂಕಿನ ಬಹುತೇಕ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭಿಸಲಾಗಿದೆ. ನಿತ್ಯ 8000ಕ್ಕೂ ಹೆಚ್ಚು ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಆಯುಕ್ತಾಲಯದ ಆದೇಶದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮೇ ತಿಂಗಳಾದ್ಯಂತ ಕೆಲಸ ಒದಗಿಸಲು ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲು ಪಿಡಿಒ ಮತ್ತು ಎಲ್ಲ ಹಂತದ ನರೇಗಾ ಯೋಜನೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ 1,16,930 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 24,537 ಸಕ್ರಿಯ ಉದ್ಯೋಗ ಚೀಟಿಗಳಿವೆ. 50,440 ಸಕ್ರಿಯ ಕೂಲಿ ಕಾರ್ಮಿಕರು ಇದ್ದಾರೆ ಎಂದರು. ಕೂಲಿ ಮೊತ್ತ 370: ಎಪ್ರಿಲ್ನಲ್ಲಿ 1ರಿಂದ ಕೂಲಿ ಮೊತ್ತವನ್ನು ಸರ್ಕಾರ 370 ರೂ.ಗೆ ಹೆಚ್ಚಿಸಿದೆ. ಅದ್ದರಿಂದ ಗ್ರಾಮೀಣ ಜನರು ಬೇರೆ ಸ್ಥಳಗಳಿಗೆ ಹೋಗಿ ಕೆಲಸ ಹುಡುಕುವ ಬದಲು ಸ್ಥಳೀಯವಾಗಿ ವಾಸಿಸುವ ಸ್ಥಳದಲ್ಲೇ ಕೆಲಸ ಪಡೆದು ಉತ್ತಮವಾಗಿ ಜೀವನ ನಡೆಸಬಹುದು ಎನ್ನುತ್ತಾರೆ ತಾಪಂ ಉ್ಘಖಾ ಯೋಜನೆಯ ಸಹಾಯಕ ನಿರ್ದೇಶಕರಾದ ಕುಮಾರ ಪೂಜಾರ ಅವರು. ಮುಂದುವರಿದು ಮಾತನಾಡಿದ ಅವರು, ಕೃಷಿ ಗ್ರಾಮೀಣ ಜನರ ಮೂಲ ಉದ್ಯೋಗ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಾದ ಬೀಜ, ರಸಗೊಬ್ಬರ, ಮಕ್ಕಳನ್ನು ಶಾಲೆ ಕಾಲೇಜಿಗೆ ದಾಖಲಿಸಲು ಶುಲ್ಕ ಪಾವತಿಸಲು ಉದ್ಯೋಗ ಖಾತ್ರಿಯಲ್ಲಿ ದುಡಿದ ಹಣವನ್ನು ಬಳಕೆ ಮಾಡಬಹುದು. ಇದಲ್ಲದೇ ಇನ್ನಿತರೆ ಜೀವನದ ವೆಚ್ಚಗಳಿಗೆ ಬಳಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಬಿಎಫ್ಟಿ, ಜಿಕೆಎಂ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಉದ್ಯೋಗ ಚೀಟಿ ಇಲ್ಲದೆ ಇರುವ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಸ್ವೀಕರಿಸಲಿದ್ದಾರೆ. ಉದ್ಯೋಗ ಚೀಟಿ ಇರುವ ನೋಂದಾಯಿತ ಕೂಲಿಕಾರರಿಂದ ಕೆಲಸದ ಬೇಡಿಕೆಯನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.