ಭೋವಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವಂತೆ ಆಗ್ರಹ

ಭೋವಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವಂತೆ ಆಗ್ರಹ Demand for representation of Bhovi community in the cabinet

ಲೋಕದರ್ಶನ ವರದಿ  

          ಸಿಂದಗಿ 09:  ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗುತ್ತಿರುವ ಹೊಸ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಭೋವಿ ಸಮುದಾಯಕ್ಕೆ ಅವಕಾಶ ದೊರೆಯಬೇಕು. ಜತೆಗೆ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕಾದರೆ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಪುಲಕೇಶಿ ಕ್ಷೇತ್ರದ ಶಾಸಕ ಎ.ಸಿ.ಶ್ರೀನಿವಾಸ್, ಪಾವಗಡದ ವೆಂಕಟೇಶ್ ಈ ಮೂವರಲ್ಲಿ ಯಾರಿಗಾದರು ಸಚಿವ ಸ್ಥಾನ ಕಲ್ಪಿಸಬೇಕು ಎಂದು ಭೋವಿ ವಡ್ಡರ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ  ಆಗ್ರಹಿಸಿದ್ದಾರೆ. 

         ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ಪ್ರಸ್ತುತ ಸಮುದಾಯದಿಂದ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಪುಲಕೇಶಿ ಕ್ಷೇತ್ರದ ಶಾಸಕ ಎ.ಸಿ.ಶ್ರೀನಿವಾಸ್, ಪಾವಗಡದ ವೆಂಕಟೇಶ್ ಅವರು ಸಂಘಟನೆ ಹಾಗೂ ಸಾರ್ವಜನಿಕ ಜೀವನದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯದ ಸಂದೇಶ ಸಾರಬೇಕು. ಭೋವಿ ಸಮುದಾಯವು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು, ವಿಧಾನಸೌಧ ನಿರ್ಮಾಣದಿಂದ ಹಿಡಿದು ವಿವಿಧ ನೀರಾವರಿ ಯೋಜನೆಗಳ ಅಭಿವೃದ್ಧಿಯವರೆಗೆ ಭೋವಿ ವಡ್ಡರ ಸಮುದಾಯದ ಪಾತ್ರ ಗಮನಾರ್ಹವಾಗಿದೆ. 

         ಮೊದಲ ಹಂತದ ಸಂಪುಟ ರಚನೆಯಲ್ಲಿ ಭೋವಿ ಸಮುದಾಯಕ್ಕೆ ಅವಕಾಶ ದೊರೆಯದಿರುವುದು ಸಮುದಾಯದಲ್ಲಿ ಬೇಸರ ತಂದಿದೆ ಹಾಗೂ ವಿಧಾನ ಪರಿಷತ್ ನಾಮನಿರ್ದೇಶನ ಹಾಗೂ ನಿಗಮ-ಮಂಡಳಿಗಳ ನೇಮಕಾತಿಗಳಲ್ಲಿಯೂ ಭೋವಿ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕು. ಪರಿಶಿಷ್ಟ ಜಾತಿಗಳಲ್ಲಿನ ಪ್ರಮುಖ ಸಮುದಾಯಗಳಲ್ಲಿ ಒಂದಾದ ಭೋವಿ ವಡ್ಡರ ಸಮುದಾಯ ಅವಕಾಶ ವಂಚಿತಗೊಳಿಸಬಾರದು. ಸರಕಾರ ಸಮುದಾಯದ ಹಿತಾಸಕ್ತಿ ಗಮನದಲ್ಲಿಟ್ಟು ಕೊ0ಡು ಮು0ದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಭೋವಿ ಸಮಾಜದ ಮುಖಂಡರಾದ ಮುತ್ತಪ್ಪ ಪಾತ್ರೋಟ, ಸುನಂದಾ ಯಂಪೂರೆ, ಭೀಮಾಶಂಕರ ಯಂಪೂರೆ, ದೀಲೀಪ ಆಲಕುಂಟೆ, ಸಚೀನ ಮಂಜಾಳಕರ, ದಯಾನಂದ ಗೊಳಸಾರ ಸೇರಿದಂತೆ ಅನೇಕರು ಸರಕಾರಕ್ಕೆ ಒತ್ತಾಯಿಸಿದ್ದಾರೆ.