ಮಹಿಳಾ ಆಯೋಗಕ್ಕೆ ಬೀಗ ಜಡಿದು ಎಎಪಿ ಪ್ರತಿಭಟನೆ: ಪ್ರಮೀಳಾ ನಾಯ್ಡು ವಜಾಗೆ ಆಗ್ರಹ
ಬೆಂಗಳೂರು, ಸೆ.28 ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಮಹಿಳಾ ಆಯೋಗವು ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿ ಆಯೋಗದ ಕಚೇರಿಗೆ ಬೀಗ ಜಡಿದು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ, “ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 42 ಅತ್ಯಾಚಾರ ನಡೆಯುತ್ತಿದೆ. ಅಂದರೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. 2018ರ ಜನವರಿಯಿಂದ 2021ರ ಜುಲೈ ತನಕ ರಾಜ್ಯದಲ್ಲಿ 1,759 ಅತ್ಯಾಚಾರ ಪ್ರಕರಣಗಳು ನಡೆದಿವೆ. 2021ರ ಮೊದಲ ಏಳು ತಿಂಗಳಿನಲ್ಲಿ ರಾಜ್ಯದಲ್ಲಿ 307 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದೇ ಅವಧಿಯಲ್ಲಿ 1,300 ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಶಿಕ್ಷೆಯಾಗಿರುವುದು 6 ಆರೋಪಿಗಳಿಗೆ ಮಾತ್ರ. ಇವೆಲ್ಲವನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವ ಮಹಿಳಾ ಆಯೋಗದ ಅಧ್ಯಕ್ಷರಿಗೆ ನಾಚಿಕೆಯಾಗಬೇಕು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಇತ್ತೀಚೆಗೆ ಬಿಡುಗಡೆಯಾದ ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ, 2020ರಲ್ಲಿ ರಾಜ್ಯದಲ್ಲಿ 3,246 ಮಹಿಳೆಯರ ಮೇಲೆ ಹಲ್ಲೆ ಹಾಗೂ 47 ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. 8 ಮಹಿಳೆಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. 178 ಮಹಿಳೆಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಮಾನಸಿಕ ಕಿರುಕುಳ ಹಾಗೂ ಬೆದರಿಕೆಗೆ ಹೆದರಿ 263 ಮಹಿಳೆಯರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. 6 ಮಹಿಳೆಯರ ಮೇಲೆ ಆಸಿಡ್ ದಾಳಿ ನಡೆದಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ 55 ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಈ ಪೈಕಿ ಮಹಿಳಾ ಆಯೋಗದ ಅಧ್ಯಕ್ಷರು ಎಷ್ಟು ಸಂತ್ರಸ್ತರನ್ನು ಭೇಟಿಯಾಗಿದ್ದಾರೆ? ಅವರು ಸಕ್ರಿಯರಾಗಲು ಇನ್ನೂ ಎಷ್ಟು ಮಹಿಳೆಯರು ಶೋಷಣೆಗೆ ಒಳಗಾಗಬೇಕು?” ಎಂದು ಅವರು ಪ್ರಶ್ನಿಸಿದರು.
ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡೆ ಉಷಾ ಮೋಹನ್ ಮಾತನಾಡಿ, “ಪ್ರಮೀಳಾ ನಾಯ್ಡುರವರು ಆಯೋಗದ ಅಧ್ಯಕ್ಷರೋ ಅಥವಾ ಬಿಜೆಪಿಯ ಏಜೆಂಟರೋ ಎಂಬ ಅನುಮಾನ ಕಾಡುತ್ತಿದೆ. ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಪ್ರಕರಣಗಳು ಜನರ ಗಮನಕ್ಕೆ ಬಂದು ಸರ್ಕಾರದ ಮಾನ ಬೀದಿ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರು ನಿಷ್ಕ್ರಿಯರಾಗಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರಾದ ಆರ್. ಪ್ರಮೀಳಾ ನಾಯ್ಡು ಹಾಗೂ ಸದಸ್ಯರು ಸರ್ಕಾರದ ಸೌಲಭ್ಯ ಪಡೆಯುವುದಕ್ಕೆ ಸೀಮಿತವಾಗಿದ್ದಾರೆ. ಕೋಟ್ಯಂತರ ಅನುದಾನ, ನಾನಾ ಸೌಲಭ್ಯಗಳನ್ನು ಆಯೋಗಕ್ಕೆ ನೀಡಿ ದುಂದುವೆಚ್ಚ ಮಾಡುವ ಮಾಡಲು ಆಯೋಗವನ್ನು ವಜಾ ಮಾಡಿ, ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ದಿಟ್ಟ ಮಹಿಳೆಯ ನೇತೃತ್ವದಲ್ಲಿ ಆಯೋಗದ ಪುನಾರಚನೆ ಆಗಲಿ” ಆಗ್ರಹಿಸಿದರು.
“ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರವರ ಸರ್ಕಾರವು ಸ್ವಾತಿ ಮಾಲಿವಾಲ್ ಎಂಬ ದಿಟ್ಟ ಹೋರಾಟಗಾರ್ತಿಯನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಳೆದ ಐದು ವರ್ಷಗಳಲ್ಲಿ ಅವರ ನೇತೃತ್ವದಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ. ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸ್ಸುಗಳು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸ್ವಾತಿ ಮಾಲಿವಾಲ್‌ರವರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಜ್ಯದ ಆಯೋಗಕ್ಕೂ ಅಂತಹ ದಿಟ್ಟ ಅಧ್ಯಕ್ಷರ ಅಗತ್ಯವಿದೆ.” ಎಂದು ಅವರು ಅಭಿಪ್ರಾಯಪಟ್ಟರು.
ಎಎಪಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, “ಜಾರಕಿಹೊಳಿ ಪ್ರಕರಣದಲ್ಲಿ ವಿಡಿಯೋ ನಕಲಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ನಂತರ ಅದು ಹನಿಟ್ರಾಪ್ ಎಂದು ಜಾರಕಿಹೊಳಿಯವರೇ ಹೇಳಿದರು. ಇದರಿಂದ ವಿಡಿಯೋ ನಕಲಿ ಅಲ್ಲವೆಂದು ಸಾಬೀತಾದಂತಾಯಿತು. ಹಾಗಾದರೆ ವಿಡಿಯೋ ನಕಲಿ ಎಂದು ಬಿಜೆಪಿ ನಾಯಕರು ಹೇಳಿದ್ದೇಕೆ? ಅದು ಕಾಮುಕರನ್ನು ರಕ್ಷಿಸುವ ಪ್ರಯತ್ನವಲ್ಲವೇ? ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸರ್ಕಾರವು ಸಂತ್ರಸ್ತೆಯ ಪರ ನಿಲ್ಲಬೇಕು. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಯುವತಿಯನ್ನು ಜಾರಕಿಹೊಳಿ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಇಡೀ ಸರ್ಕಾರವೇ ಆರೋಪಿಯ ರಕ್ಷಣೆಗೆ ನಿಂತಿದೆ” ಎಂದು ಕಿಡಿಕಾರಿದರು.
ಎಲ್ಲಿ ತನ್ನ ಸಿಡಿ ಬಯಲಾಗುತ್ತದೆಯೋ ಎಂಬ ಭಯದಲ್ಲಿ ನ್ಯಾಯಾಲಯದಿಂದ ಇಂಜಂಕ್ಷನ್ ಆರ್ಡರ್ ಪಡೆಯುವುದೇ ಬಿಜೆಪಿ ನಾಯಕರ ಮುಖ್ಯ ಕಾಯಕವಾಗಿದೆ. ರಾಜ್ಯದ ಆಡಳಿತ ಪಕ್ಷದಲ್ಲಿ ಕಾಮುಕರೇ ತುಂಬಿಕೊಂಡಿದ್ದು, ಅವರಿಗೆ ಮಹಿಳೆಯರ ಮಾನರಕ್ಷಣೆಗಿಂತ ತಮ್ಮ ಮಾನ ಉಳಿದರೆ ಸಾಕಾಗಿದೆ. ಅತ್ಯಾಚಾರದ ವಿರುದ್ಧ ಮಾತಾಡುವ ನೈತಿಕತೆಯನ್ನೇ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ. “ರಾಮರಾಜ್ಯ” ಮಾಡುತ್ತೇವೆಂದು ಹೇಳಿ ಅಧಿಕಾರ ಪಡೆದ ಬಿಜೆಪಿಯು “ಕಾಮರಾಜ್ಯ” ನಿರ್ಮಾಣದಲ್ಲಿ ನಿರತವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಆಮ್ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‌ರವರು ಮಾತನಾಡಿ, “ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದ್ದ 71 ಸಾಂತ್ವನ ಕೇಂದ್ರಗಳನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿದ್ದ 194 ಸಾಂತ್ವನ ಕೇಂದ್ರಗಳ ಪೈಕಿ 123 ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆ ಜಾಸ್ತಿಯಿರುವ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚು ದಾಖಲಾಗುವ ಬೆಂಗಳೂರಿನಲ್ಲೇ ಎಲ್ಲಾ ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರದ ಕೌಟುಂಬಿಕ ಸಲಹಾ ಕೇಂದ್ರಗಳು ನಿರುಪಯೋಗಿಯಾಗಿದ್ದು, ನೊಂದ ಮಹಿಳೆಯರಿಗೆ ಅಗತ್ಯವಿರುವ ಯಾವ ಸೇವೆಯೂ ಅಲ್ಲಿಲ್ಲ” ಎಂದು ಬೇಸರ ವ್ಯಕ್ಯಪಡಿಸಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಯೋಗಿತಾ ರೆಡ್ಡಿ, ಪ್ರಶಾಂತಿ, ಅಶೋಕ್ ಮತ್ಯುಂಜಯ, ಶಾಶಾವಲಿ, ಫಿರೋಜ್ ಖಾನ್ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಸ್ಮಶಾನ ಅಭಿವೃದ್ಧಿ ಕಾಮಗಾರಿ ವಿಳಂಬ ಅನಿರ್ಧಿಷ್ಟ ಧರಣಿ ಆರಂಭ
ಮಂಕಿಪಾಕ್ಸ್ ಸಭೆಯಲ್ಲಿ ಸಿಎಂ ಅಧಿಕಾರಿಗಳಿಗೆ ಕೊಟ್ಟ ಸೂಚನೆಗಳೇನು?
ಕ್ಯೂಆರ್ ಕೋಡ್ ನಾಶಪಡಿಸಿದ ಆರೋಪ; ಪೇಟಿಎಂ ಉದ್ಯೋಗಿಗಳ ವಿರುದ್ಧ ಫೋನ್ ಪೇ ದೂರು
ಮಂಕಿಪಾಕ್ಸ್ ಸೋಂಕು ದೃಢಪಟ್ಟರೆ 21 ದಿನ ಐಸೋಲೇಟ್ – ಸಚಿವ ಡಾ.ಕೆ.ಸುಧಾಕರ್
ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಧಾನಿ ಮೋದಿ ಸಹೋದರ
ಕಾಮನ್ವೆಲ್ತ್ ಗೇಮ್ಸ್: ಲಾನ್ ಬೌಲ್ಸ್ ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಮಹಿಳೆಯರು 